ಯುಜಿಸಿ ವಿನಾಯಿತಿ 1000 ಪ್ರಾಧ್ಯಾಪಕರಿಗೆ ಪದೋನ್ನತಿ

ವಿಜಯವಾಣಿ-3
Published on

ಪಿಎಚ್​ಡಿ ಪಡೆದವರಿಗೂ ನ್ಯಾಯ | ಹೆಚ್ಚಾಗಲಿದೆ ವೇತನ, ಪಿಂಚಣಿ ಸೌಲಭ್ಯ | ನಿರಂತರ ಹೋರಾಟಕ್ಕೆ ಕೊನೆಗೂ ಜಯ

ವಿಲಾಸ ಮೇಲಗಿರಿ, ಬೆಂಗಳೂರು: ಪಿಎಚ್​ಡಿ ಪದವಿ ಪಡೆಯಲು ಯುಜಿಸಿ ಕಾಲಾವಕಾಶ ವಿನಾಯಿತಿ ನೀಡಿದ್ದರಿಂದ ರಾಜ್ಯದ ಪದವಿ ಕಾಲೇಜುಗಳ ಸುಮಾರು ಸಾವಿರ ಅಧ್ಯಾಪಕರಿಗೆ ಬಡ್ತಿ ಭಾಗ್ಯ ದೊರೆತಿದೆ. 2021ರ ಗಡುವನ್ನು 2024ಕ್ಕೆ ವಿಸ್ತರಿಸಿದೆ. 2018ಕ್ಕೂ ಮೊದಲು ಪಿಎಚ್​ಡಿ ಪದವಿ ಪಡೆಯದೇ ಇದ್ದರೂ ಪದೋನ್ನತಿ ನೀಡಲಾಗುತ್ತಿತ್ತು. ಯುಜಿಸಿ ನಿಯಮಾವಳಿಯಂತೆ 2018ರ ಬಳಿಕ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಸಹ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಬೇಕಾದರೆ ಪಿಎಚ್​ಡಿ ಕಡ್ಡಾಯಗೊಳಿಸಿದೆ. ಈ ನಿಯಮ ಜಾರಿ ಮಾಡುವಾಗ ಪಿಎಚ್​ಡಿ ಪಡೆಯಲು 2018ರಿಂದ ಮೂರು ವರ್ಷ ಗಡುವು ನೀಡಲಾಗಿತ್ತು. ಅಂದರೆ 2021 ಜುಲೈ ನಂತರ ಬಡ್ತಿ ಪಡೆಯಲು ಪಿಎಚ್​ಡಿ ಮಾಡಲೇಬೇಕು ಎಂಬುದು ನಿಯಮದಲ್ಲಿತ್ತು.

2018ರ ಯುಜಿಸಿ ನಿಯಮದ ಪ್ರಕಾರ ಪದವಿ ಕಾಲೇಜು ಅಧ್ಯಾಪಕರಿಗೆ ಆರು ವರ್ಷಕ್ಕೆ 1 ಬಡ್ತಿ, ನಂತರ 5 ವರ್ಷಕ್ಕೆ ಒಂದು ಬಡ್ತಿ, ಬಳಿಕ 3 ವರ್ಷಕ್ಕೆ ಇನ್ನೊಂದು ಬಡ್ತಿ, ತದನಂತರದ 3 ವರ್ಷಕ್ಕೆ ಮತ್ತೊಂದು ಬಡ್ತಿ ದೊರೆಯುತ್ತವೆ. ಈ ನಿಯಮದ ಪ್ರಕಾರ ಮೂರನೇ ಬಡ್ತಿ ಅಂದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಸಹ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು 14 ವರ್ಷ ಸೇವೆ ಸಲ್ಲಿಸಿರಲೇಬೇಕು. ಆದರೆ, 2009ರಲ್ಲಿ ನೇಮಕಗೊಂಡವರು 3ನೇ ಬಡ್ತಿ ಪಡೆಯಲು ಸೆಪ್ಟೆಂಬರ್ 2023ಕ್ಕೆ ಅರ್ಹರಾಗುತ್ತಾರೆ. ಆದರೆ ಸಹ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು 2021ರ ಒಳಗೆ ಪಿಎಚ್​ಡಿ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು. ಇದರಿಂದ 2007ರಲ್ಲಿ ನೇಮಕಗೊಂಡ 100 ಹಾಗೂ 2009ರಲ್ಲಿ ನೇಮಕಗೊಂಡ 800 ಮಂದಿ (ಪಿಎಚ್​ಡಿ ಪಡೆಯದೇ ಇರುವ) ಸಹಾಯಕ ಪ್ರಾಧ್ಯಾಪಕರಿಗೆ ಸಹ ಪ್ರಾಧ್ಯಾಪಕರಾಗಲು ಅವಕಾಶವಿರಲಿಲ್ಲ. ಈ ವಿನಾಯಿತಿಯಿಂದ ಇವರಿಗೆ ಒಳ್ಳೆಯ ಪಿಂಚಣಿ ದೊರೆಯಲು ಸಾಧ್ಯವಾಗುತ್ತದೆ.

ನಿಯಮ ಸಡಿಲಿಕೆ: ಪ್ರಾಧ್ಯಾಪಕರು ನಿರಂತರ ಹೋರಾಟದ ಪರಿಣಾಮ ಯುಜಿಸಿ ನಿಯಮ ಸಡಿಲಿಸಿದೆ. ಪಿಎಚ್​ಡಿ ಪಡೆಯಲು ಇದ್ದ 2021ರ ಗಡುವನ್ನು 2024ರ ಡಿಸೆಂಬರ್ 31ಕ್ಕೆ ವಿಸ್ತರಿಸಿದೆ. ಬಡ್ತಿಯಿಂದ ಮೂಲ ವೇತನದಲ್ಲಿ ಮಾಸಿಕ ಸುಮಾರು 35 ಸಾವಿರ ರೂ. ಹೆಚ್ಚಳವಾಗಲಿದೆ.

ಪಿಎಚ್​ಡಿ ಪದವಿ ಪಡೆಯದ ಸುಮಾರು 1 ಸಾವಿರ ಪ್ರಾಧ್ಯಾಪಕರ ಪದೋನ್ನತಿಗೆ ಕುತ್ತು ಬಂದಿತ್ತು. ಇದರಿಂದ ವೇತನದಲ್ಲೂ ದೊಡ್ಡ ಮಟ್ಟದ ನಷ್ಟವಾಗುತ್ತಿತ್ತು. ನಿಯಮ ಸಡಿಲಗೊಳಿಸಬೇಕೆಂಬ ಹೋರಾಟಕ್ಕೆ ಯುಜಿಸಿ ಸ್ಪಂದಿಸಿದ್ದರಿಂದ ಬಡ್ತಿ ಸಲೀಸಾಗಿದೆಯಲ್ಲದೆ, ವೇತನ ಬಡ್ತಿಯೂ ದೊರೆಯುತ್ತದೆ.

| ಡಾ.ಎಚ್.ಜಿ.ನಾರಾಯಣ್ ಪ್ರಧಾನ ಕಾರ್ಯದರ್ಶಿ, ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘಪಿಎಚ್​ಡಿಗೆ ಗೈಡ್​ಗಳ ಕೊರತೆ

ಯುಜಿಸಿ ಪಿಎಚ್​ಡಿ ಕಡ್ಡಾಯ ಮಾಡಿದೆಯಾದರೂ ರಾಜ್ಯದಲ್ಲಿ ಅನೇಕರಿಗೆ ಮಾರ್ಗದರ್ಶಕರ ಕೊರತೆ ಕಾಡುತ್ತಿದೆ. ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಮಾತ್ರ ಮಾರ್ಗದರ್ಶಕರಾಗಲು ಅವಕಾಶವಿರುವುದರಿಂದ ಸಮಸ್ಯೆ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಅಧ್ಯಾಪಕರ ನೇಮಕ ನಡೆಯುತ್ತಿರುವುದರಿಂದ ಪದವಿ ಕಾಲೇಜುಗಳ ಅರ್ಹ ಅಧ್ಯಾಪಕರಿಗೂ ಮಾರ್ಗದರ್ಶಕರಾಗಲು ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ತು ಮತ್ತು ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂಬುದು ಅಧ್ಯಾಪಕರ ಆಗ್ರಹ.

ತಡೆಹಿಡಿದ ವೇತನ ಮುಂಬಡ್ತಿಗೆ ಒತ್ತಾಯ

2016ಕ್ಕೂ ಮೊದಲು ಪಿಎಚ್​ಡಿ ಪಡೆದ ಪದವಿ ಕಾಲೇಜು ಅಧ್ಯಾಪಕರಿಗೆ ಪ್ರೋತ್ಸಾಹದಾಯಕವಾಗಿ ಮೂರು ವೇತನ ಮುಂಬಡ್ತಿ ನೀಡಲಾಗುತ್ತಿತ್ತು. 2016ರ ಜನವರಿ 1ರ ಬಳಿಕ ಯುಜಿಸಿ ಇದನ್ನು ತಡೆ ಹಿಡಿದಿದೆ. ಹಾಗಾಗಿ ಪಿಎಚ್​ಡಿ ಪಡೆದ ಬಹುತೇಕ ಪ್ರಾಧ್ಯಾಪಕರಲ್ಲಿ ಈ ಬಗ್ಗೆ ಅಸಮಾಧಾನವಿದೆ. ತಡೆಹಿಡಿದ ವೇತನ ಮುಂಬಡ್ತಿ ನೀಡಿದರೆ ಪಿಎಚ್​ಡಿ ಪದವಿ ಪಡೆದದ್ದಕ್ಕೂ ಗೌರವ ಬರುತ್ತದೆ ಎಂಬ ಅಭಿಪ್ರಾಯವೂ ಇದೆ.

ಕಾಲೇಜು ಮೇಲ್ದರ್ಜೆಗೇರಿಸಿ

ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳಿವೆ. ಈ ಪೈಕಿ ಜಿಲ್ಲಾ ಕೇಂದ್ರಗಳಲ್ಲಿರುವ ಹಾಗೂ ಹೆಚ್ಚು ವಿದ್ಯಾರ್ಥಿಗಳಿರುವ ಕೆಲವು ಕಾಲೇಜುಗಳನ್ನಾದರೂ ಸಂಶೋಧನಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ಆಗ ಆ ಕೇಂದ್ರಗಳ ಅಧ್ಯಾಪಕರಿಗೆ ಪಿಎಚ್​ಡಿಗೆ ಗೈಡ್ ಆಗಲು ಸಾಧ್ಯವಾಗುತ್ತದೆ. ಈ ಕುರಿತು ಅಧ್ಯಾಪಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net