

ಉಡುಪಿ: ಹಿರಿಯ ರಂಗಕರ್ಮಿ, ಲೇಖಕ ಉದ್ಯಾವರ ಮಾಧವ ಆಚಾರ್ಯ ಅವರು ಸೋಮವಾರ ನಿಧನರಾದರು.
79 ವರ್ಷ ವಯಸ್ಸಿನ ಉದ್ಯಾವರ ಮಾಧವ ಆಚಾರ್ಯರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಉದ್ಯಾವರ ಮಾಧವ ಆಚಾರ್ಯರು ರಂಗ ನಿರ್ದೇಶಕ, ಕಥೆಗಾರ, ಕವಿ, ನಟರಾಗಿ ಜನಾನುರಾಗಿಯಾಗಿದ್ದರು. ಪ್ರಸಿದ್ಧ ಧಾರಾವಾಹಿ 'ಗುಡ್ಡೆದ ಭೂತ'ದಲ್ಲಿ ನಟಿಸಿದ್ದ ಅವರು ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು. ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ್ದರು.
ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕರಾಗಿದ್ದ ಉದ್ಯಾವರ ಮಾಧವ ಆಚಾರ್ಯರು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಉಪನ್ಯಾಸಕ ವೃತ್ತಿಯನ್ನೂ ಕೆಲವರ್ಷ ನಿರ್ವಹಿಸಿದ್ದರು.