

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ರಾಮ್ಲೀಲಾ ಉತ್ಸವದಲ್ಲಿ ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭೋಪಾಲ್ನ ರವೀಂದ್ರ ಭವನದಲ್ಲಿ ಅ. 20ರ ಸಂಜೆ ನಡೆದ ಈ ಪ್ರದರ್ಶನದಲ್ಲಿ ಉಡುಪಿಯಿಂದ ತೆರಳಿದ್ದ 16 ಕಲಾವಿದರು ಭಾಗಿಯಾಗಿದ್ದರು. ಥಾಯ್ಲೆಂಡ್, ಮಲೇಷ್ಯಾ, ಶ್ರೀಲಂಕಾ, ಫಿಜಿ ಮಾತ್ರವಲ್ಲದೆ ದೇಶದಲ್ಲಿನ ಅಸ್ಸಾಂ, ಒಡಿಶಾ ಮುಂತಾದೆಡೆಯ ಕಲಾವಿದರ ಮಧ್ಯೆ ಕರ್ನಾಟಕದಿಂದ ಯಕ್ಷಗಾನ ಕಲಾವಿದರು ಪ್ರದರ್ಶನ ತೋರಿದ್ದಾರೆ.
ರಾಮ, ಲಕ್ಷ್ಮಣ, ಸೀತೆ ಅರಣ್ಯಕ್ಕೆ ಪ್ರವೇಶಿಸುವುದರಲ್ಲಿಂದ ಆರಂಭವಾಗುವ 'ಪಂಚವಟಿ' ಪ್ರಸಂಗವನ್ನು ಇಲ್ಲಿ ಪ್ರದರ್ಶಿಸಲಾಯಿತು. ಈ ಪ್ರಸಂಗವನ್ನು ಎಲ್ಲೆಡೆಯ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥದ್ದೊಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಮಧ್ಯಪ್ರದೇಶದ ಸರ್ಕಾರಕ್ಕೆ ಯಕ್ಷಸಂಜೀವ ಯಕ್ಷಗಾನ ಕೇಂದ್ರದವರು ಧನ್ಯವಾದ ಸಲ್ಲಿಸಿದ್ದಾರೆ.