

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಅಪರಿಚಿತನೋರ್ವ ಕರೆ ಮಾಡಿ, ಬಾಂದ್ರಾದಲ್ಲಿರುವ ಅವರ ನಿವಾಸ ಮಾತೋಶ್ರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಾನು ದುಬೈನಿಂದ ಕರೆ ಮಾಡುತ್ತಿರುವುದಾಗಿಯೂ ತಿಳಿಸಿದ್ದಾನೆ.
ತನ್ನನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಎಂದು ಹೇಳಿಕೊಂಡಿರುವ ಆತ ಶನಿವಾರ ಸಂಜೆಯಿಂದ ಸುಮಾರು ನಾಲ್ಕು ಬಾರಿ ಉದ್ಧವ್ ಠಾಕ್ರೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ 10.30ರ ಹೊತ್ತಿಗೆ ಆತ ಎರಡು ಬಾರಿ ಕರೆ ಮಾಡಿದ ನಂತರ, ಬಾಂದ್ರಾದ ಕಲನಗರ ಕಾಲನಿಯಲ್ಲಿರುವ ಉದ್ಧವ್ ಠಾಕ್ರೆ ನಿವಾಸದ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!
ಈತನ ಕರೆಯನ್ನು ಟೆಲಿಫೋನ್ ಆಪರೇಟರ್ ಮೊದಲು ಸ್ವೀಕರಿಸಿದ್ದಾರೆ. ದಾವೂದ್ ಇಬ್ರಾಹಿಂ ಕಡೆಯಿಂದ ಮಾತನಾಡುತ್ತಿದ್ದೇನೆ. ದಾವೂದ್ಗೆ ಸಿಎಂ ಉದ್ಧವ್ ಠಾಕ್ರೆ ಬಳಿ ಮಾತನಾಡುವುದಿದೆ ಫೋನ್ ಕನೆಕ್ಟ್ ಮಾಡಿ ಎಂದು ಆತ ಹೇಳಿದ್ದಾನೆ. ಆದರೆ ಟೆಲಿಫೋನ್ ಆಪರೇಟರ್ ಸಿಎಂಗೆ ಫೋನ್ ಕನೆಕ್ಟ್ ಮಾಡಲಿಲ್ಲ. ಆತ ಮತ್ತೆ ಕಾಲ್ ಮಾಡಿ, ನಿವಾಸವನ್ನೇ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನಮಗೆ ವಿಷಯ ತಿಳಿಸಿದ ನಂತರ ಭದ್ರತೆ ಹೆಚ್ಚಿಸಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ. ಹಾಗೇ, ನಿಜಕ್ಕೂ ದಾವೂದ್ ಕಡೆಯಿಂದಲೇ ಕರೆ ಬಂದಿದ್ದಾ? ದುಬೈನಿಂದ ಫೋನ್ ಮಾಡಿದ್ದನಾ ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)