

ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್ ಜನರಲ್ ಆಗಿ ಜ್ಯುಡಿತ್ ರೇವಿನ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ನಂತರ ಮಾತನಾಡಿ, ಕೊವಿಡ್-19ನಂತಹ ಒಂದು ಐತಿಹಾಸಿಕ ಸಂಕಷ್ಟ ಸಮಯದಲ್ಲಿ ದಕ್ಷಿಣ ಏಷ್ಯಾದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವುದು ನನ್ನ ದೊಡ್ಡ ಸೌಭಾಗ್ಯವೇ ಸರಿ. ಭಾರತ ಮತ್ತು ಅಮೆರಿಕದ ಉದ್ದೇಶ, ಧ್ಯೇಯಗಳನ್ನು ಕರ್ನಾಟಕ, ಕೇರಳ, ತಮಿಳುನಾಡು, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ಮುನ್ನಡೆಸಿಕೊಂಡು ಹೋಗುವತ್ತ ಕೆಲಸ ಮಾಡುತ್ತೇನೆ. ಈ ಮೂಲಕ ಭಾರತ-ಅಮೆರಿಕ ನಡುವಿನ ಸ್ನೇಹ ವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಜ್ಯುಡಿತ್ ಅವರು ಚೆನ್ನೈಗೆ ಆಗಮಿಸುವ ಮೊದಲು, 2017ರಿಂದ ಪೆರುವಿನ ಲಿಮಾದಲ್ಲಿ ಪಬ್ಲಿಕ್ ಅಪೇರ್ಸ್ ಕಾನ್ಸುಲರ್ ಆಗಿ ಕಾರ್ಯ ನಿರ್ವಹಿಸಿದ್ದರು. 2015ರಿಂದ 2017ರವರೆಗೆ ವಾಷಿಂಗ್ಟನ್ ಡಿಸಿಯಲ್ಲಿ ಹೈಟಿ ವಿಶೇಷ ಸಂಯೋಜನಾಧಿಕಾರಿ ಕಚೇರಿಯಲ್ಲಿ ಇಂಟರ್ನ್ಯಾಷನಲ್ ರಿಲೇಷನ್ಸ್ ಜನರಲ್ ಆಗಿದ್ದರು. ಇಸ್ಲಮಾಬಾದ್ನಲ್ಲಿ ಡೆಪ್ಯುಟಿ ಕಲ್ಚರಲ್ ಅಫೇರ್ಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇವರಿಗೆ ಇದೆ. ಇದನ್ನೂ ಓದಿ: ಡ್ರಗ್ಸ್ ಜಾಲದ ಮಾಹಿತಿ ನೀಡಿ; ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಜತೆಯಾಗಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕರೆ
2003ರಲ್ಲಿ ಸ್ಟೇಟ್ ಡಿಪಾರ್ಟ್ಮೆಂಟ್ನಲ್ಲಿ ಸೇವೆ ಆರಂಭಿಸಿದ ರೇವಿನ್, 2005ರವರೆಗೆ ಮೆಕ್ಸಿಕೋದ ಸಿಯುಡಾಡ್ನ ಜುವಾರೆನ್ ದೂತಾವಾಸದಲ್ಲಿ ವೈಸ್ ಕಾನ್ಸಲ್ ಆಗಿ ಕೆಲಸ ಮಾಡಿದ್ದಾರೆ. ಇವರು ಪತ್ರಕರ್ತೆ, ಸಂಪಾದಕಿ, ಅನುವಾದಕಿಯೂ ಹೌದು. Beyond Our Degrees of Separation: Washington Monsoons and Islamabad Blues, (ಸಹಲೇಖಕಿ), Ballet in the Cane Fields: Vignettes from a Dominican Wanderlogue ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.
ಕಾನ್ಸಲ್ ಜನರಲ್ ಜ್ಯುಡಿತ್ ರೇವಿನ್ ಅವರು ರೊಮಾನ್ಸ್ ಲ್ಯಾಂಗ್ವೇಜಸ್ ಆ್ಯಂಡ್ ಲಿಟರೇಚರ್ಸ್ ವಿಷಯದಲ್ಲಿ, ಹಾವರ್ಡ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳನ್ನೂ ಇವರು ಮಾತನಾಡಬಲ್ಲರು.