ಶುಭಕೋರುವುದರಲ್ಲೂ ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಶುಭಾಶಯ ಎಂದ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ| Udayanidhi Stalin

ವಿಜಯವಾಣಿ (11)
Published on

ಚೆನ್ನೈ: ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿ ದೇಶಾದ್ಯಂತ ವಿವಾದವನ್ನು ಎಬ್ಬಿಸಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್(Udayanidhi Stalin) ದೀಪಾವಳಿ ಸಂದರ್ಭದಲ್ಲೂ ಮತ್ತೊಂದು ಅಂತಹದೇ ಹೇಳಿಕೆ ನೀಡಿ ರಾಜಕೀಯ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಭಾನುವಾರ ದೀಪಾವಳಿ ಹಿನ್ನಲೆ ಡಿಎಂಕೆ ಪರವಾಗಿ ಚೆನ್ನೈನಲ್ಲಿ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಶೇಖರ್ ಬಾಬು, ಚೆನ್ನೈ ಕಾರ್ಪೊರೇಷನ್ ಮೇಯರ್ ಪ್ರಿಯಾ ರಾಜನ್, ಸಂಸದರಾದ ದಯಾನಿಧಿ ಮಾರನ್ ಮತ್ತು ಡಾ. ವೀರಾಸ್ವಾಮಿ, ಹಾಗೂ ಹಲವಾರು ಶಾಸಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಡಿಸಿಎಂ ಉದಯನಿಧಿ ಸ್ಟಾಲಿನ್, ದೀಪಾವಳಿಯ ಶುಭಾಶಯಗಳ ಕುರಿತು ಮಾತನಾಡುವಾಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರಿಗೆ ನನಗೆ ಏನು ಹೇಳಬೇಕೆಂದು ಅವರಿಗೆ ತೋಚಲಿಲ್ಲ. ಈ ಹಿಂದೆ ನಾನು ನೀಡಿದ ಹೇಳಿಕೆಗಳಿಂದ ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳ್ತಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಉದಯನಿಧಿ ಮಾತಿಗೆ ಸ್ಥಳದಲ್ಲಿ ಜನ ಮತ್ತು ಡಿಎಂಕೆ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದ್ದಾರೆ.

ಉದಯನಿಧಿ ಸ್ಟಾಲಿನ್ ಶುಭಾಶಯಕ್ಕೆ ಬಿಜೆಪಿ ಕಿಡಿ

ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಹಬ್ಬದ ಶುಭಾಶಯಗಳು ಎಂಬ ಉದಯನಿಧಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಉದಯನಿಧಿ ಮತ್ತು ಡಿಎಂಕೆ ತಾನೂ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ಮಾತನಾಡಿರುವ ಹಿರಿಯ ಬಿಜೆಪಿ ನಾಯಕಿ ಮತ್ತು ಮಾಜಿ ತೆಲಂಗಾಣ ರಾಜ್ಯಪಾಲೆ, ತಮಿಳಿಸೈ ಸೌಂದರರಾಜನ್,  ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ದೀಪಾವಳಿ ಶುಭಾಶಯ. ಅವರು ಒಪ್ಪುತ್ತಾರೋ ಇಲ್ಲವೋ ಎಂಬುದನ್ನು ಗೊತ್ತಿಲ್ಲ ಅವರು ಮೂಲವಾಗಿ ಹಿಂದೂಗಳು. ನಂಬುವವರನ್ನು ಮಾತ್ರ ನಾವು ಬಯಸುವುದಿಲ್ಲ. ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net