

ತಮಿಳುನಾಡು: ತೆಲುಗು ಮತ್ತು ತಮಿಳು ಸಿನಿಪ್ರಿಯರಿಗೆ ಹೆಚ್ಚು ಚಿರಪರಿಚಿತರಾಗಿರುವ ನಟ ವಿಶಾಲ್ (Actor Vishal), ಹಲವಾರು ಸೂಪರ್ಹಿಟ್ ಸಿನಿಮಾಗಳ ಮೂಲಕ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಒಂದಷ್ಟು ವಿಚಾರಗಳಿಂದ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿಶಾಲ್, ಇತ್ತೀಚೆಗೆ ತಮ್ಮ ಶಾಕಿಂಗ್ ಹೇಳಿಕೆಗಳ ಮೂಲಕ ನೆಟ್ಟಿಗರ ಹುಬ್ಬೇರಿಸುತ್ತಿದ್ದಾರೆ.
'ಮದಗಜರಾಜ', 'ಪಾಂಡಿಯಾ ನಾಡು', 'ಸತ್ಯಂ' ಚಿತ್ರಗಳ ಮೂಲಕ ಭಾರಿ ಯಶಸ್ಸನ್ನು ಗಳಿಸಿರುವ ವಿಶಾಲ್, ಕೆಲವು ತಿಂಗಳುಗಳ ಹಿಂದಷ್ಟೇ ನಟಿ ಧನ್ಸಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಶೀಘ್ರದಲ್ಲೇ ಹೊಸ ಜೀವನವನ್ನು ಪ್ರಾರಂಭಿಸಲಿದ್ದಾರೆ. ಪ್ರಸ್ತುತ, 'ಮಕುತಂ' ಸಿನಿಮಾ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವ ಅವರು, ನಿರ್ದೇಶಕ ರವಿ ಅರಸು ಅವರೊಂದಿಗಿನ ಒಂದಷ್ಟು ಭಿನ್ನಾಭಿಪ್ರಾಯಗಳಿಂದಾಗಿ ಈ ಚಿತ್ರವನ್ನು ತಾವೇ ನಿರ್ದೇಶಿಸುತ್ತಿದ್ದಾರೆ ಎಂಬ ವರದಿಗಳಿವೆ. ಅದರಲ್ಲೂ ಇತ್ತೀಚೆಗೆ ನಡೆದ ಪಾಡ್‌ಕ್ಯಾಸ್ಟ್‌ನ ಸಂದರ್ಶನದಲ್ಲಿ ಪ್ರಶಸ್ತಿಗಳ ಕುರಿತು ವಿಶಾಲ್ ನೀಡಿರುವ ಹೇಳಿಕೆಗಳು ಸದ್ಯ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿವೆ.
ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ವಿಶಾಲ್, ಕೋಟ್ಯಂತರ ಜನರಿರುವ ಈ ದೇಶದಲ್ಲಿ, ಕೇವಲ ಏಳು ಅಥವಾ ಎಂಟು ಮಂದಿ ತೀರ್ಪುಗಾರರು ಆಯಾ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟನನ್ನು ಹೇಗೆ ಆಯ್ಕೆ ಮಾಡುತ್ತಾರೆ? ಇದೆಲ್ಲವೂ ಅಸಂಬದ್ಧ. 8 ಕೋಟಿ ಜನರ ಇಷ್ಟವನ್ನು ಕೇವಲ 8 ಜನರು ಹೇಗೆ ನಿರ್ಧರಿಸಲು ಸಾಧ್ಯ? ಇದರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸೇರಿಸಿ ಹೇಳ್ತಿದ್ದೀನಿ. ಇಂತಹ ಪ್ರಶಸ್ತಿಗಳಲ್ಲಿ ನನಗೆ ನಂಬಿಕೆ ಇಲ್ಲ. ಇಲ್ಲಿಯವರೆಗೆ ನಾನು ಯಾವ ಅವಾರ್ಡ್ ಸ್ವೀಕರಿಸಿಲ್ಲ ಎಂದು ಹೀಗೆ ಹೇಳ್ತಿಲ್ಲ. ನನಗೇನಾದರೂ ಅವರು ಪ್ರಶಸ್ತಿಗಳನ್ನು ಕೊಟ್ಟರೆ, ಖಂಡಿತ ಕಸದ ಬುಟ್ಟಿಗೆ ಎಸೆಯುತ್ತೀನಿ ಎಂದು ಹೇಳಿದರು.
ಭವಿಷ್ಯದಲ್ಲಿ ಪ್ರಶಸ್ತಿಗಳು ಸಿಕ್ಕರೂ ನನ್ನ ಮಾತಿಗೆ ನಾನು ಬದ್ಧವಾಗಿರುತ್ತೇನೆ. ನಿಜವಾದ ಮನ್ನಣೆ, ಗೌರವ ಪ್ರೇಕ್ಷಕರಿಂದ ಮಾತ್ರ ಸಿಗುತ್ತದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ ಎಂದಿದ್ದಾರೆ. ಇದರೊಟ್ಟಿಗೆ ವಿಶಾಲ್ ತಮ್ಮ ಎಲ್ಲ ಸಿನಿಮಾಗಳಲ್ಲಿ ತಾವೇ ಸಾಹಸ ದೃಶ್ಯಗಳನ್ನು ಡೂಪ್ ಬಳಸದೆ ಮಾಡುವುದಾಗಿ ಹೇಳಿದ್ದಾರೆ. ದೇಹದಲ್ಲಿ 119 ಹೊಲಿಗೆಗಳು ಬಿದ್ದಿವೆ. ಆದರೂ, ಚಿತ್ರ ನೋಡಿ ಆನಂದಿಸುವ ಪ್ರೇಕ್ಷಕರ ಮುಂದೆ ಆ ನೋವು ಏನಲ್ಲ ಎಂದು ವಿಶಾಲ್ ಹೇಳುತ್ತಾರೆ,(ಏಜೆನ್ಸೀಸ್).