

ನವದೆಹಲಿ: ನಿನ್ನೆ (ಅ.19) ಪರ್ತ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ (IND vs AUS ) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ ಅವರಿಂದ ದೊಡ್ಡ ಇನ್ನಿಂಗ್ಸ್ ಬರಲಿದೆ ಎಂಬ ಭರವಸೆ ಜೋರಾಗಿತ್ತು. ಆದರೆ, ಅದು ಹುಸಿಯಾಯಿತು. 14 ಎಸೆತಗಳನ್ನು ಎದುರಿಸಿದ 'ಹಿಟ್‌ಮ್ಯಾನ್', ಒಂದು ಬೌಂಡರಿ ಬಾರಿಸಿ, ಕೇವಲ 8 ರನ್ಗೆ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು.
2027ರ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಲು ರೋಹಿತ್ಗೆ ಆಸೀಸ್ ವಿರುದ್ಧದ ಈ ಮೂರು ಏಕದಿನ ಪಂದ್ಯಗಳ ಸರಣಿ ಬಹುಮುಖ್ಯ. ಇಲ್ಲಿ ಉತ್ತಮ ಪ್ರದರ್ಶನದ ಅಗತ್ಯ ಹಾಗೂ ಅನಿವಾರ್ಯ ಎರಡು ರೋಹಿತ್ಗೆ ಕಾಡುತ್ತಿದೆ. ಮೊದಲ ಪಂದ್ಯದಲ್ಲಿ ವಿಫಲರಾದ ಹಿಟ್‌ಮ್ಯಾನ್, ಇನ್ನುಳಿದ ಎರಡು ಮ್ಯಾಚ್ಗಳಲ್ಲಿ ದೊಡ್ಡ ಇನ್ನಿಂಗ್ಸ್ ನೀಡಲೇಬೇಕಿದೆ. ಇದು ಅಭಿಮಾನಿಗಳು ಹಾಗೂ ಟೀಮ್ ಮ್ಯಾನೇಜ್ಮೆಂಟ್ ಆಶಯವೂ ಹೌದು. ಎರಡನೇ ಏಕದಿನ ಪಂದ್ಯ ಇದೇ ಗುರುವಾರ (ಅ.23) ಅಡಿಲೇಡ್‌ನಲ್ಲಿ ನಡೆಯಲಿದೆ.
ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮ ಅಪರೂಪದ ದಾಖಲೆಯತ್ತ ಎದುರುನೋಡುತ್ತಿದ್ದು, ಕೇವಲ ಎರಡು ರನ್ ಗಳಿಸಿದರೆ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಲಿದ್ದಾರೆ. ಇಲ್ಲಿಯವರೆಗೆ, ಹಿಟ್‌ಮ್ಯಾನ್ 20 ಪಂದ್ಯಗಳಲ್ಲಿ 998 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ.