

Udaipur Files: ನೈಜ ಘಟನೆ ಆಧರಿತ ‘ಉದಯಪುರ್ ಫೈಲ್ಸ್’ ಚಿತ್ರ ಸದ್ಯ ಭಾರೀ ವಿವಾದದಲ್ಲಿ ಸಿಲುಕಿಕೊಂಡಿದೆ. ಈ ವಿಷಯ ಕೇವಲ ವಿರೋಧಗಳಿಂದ ಮಾತ್ರ ತುಂಬದೆ, ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಸಿನಿಮಾ ನಿರ್ಮಾಪಕರಿಗೆ ಇದೀಗ ಸುಪ್ರೀಂ ಕೋರ್ಟ್ ಕಡೆಗೂ ಬಿಡುಗಡೆ ಭಾಗ್ಯವನ್ನು ನೀಡಿದೆ. ಅದೂ ಕಾನೂನು ಸಮರ ಇತ್ಯರ್ಥ ಬಳಿಕ ಎಂಬುದು ಗಮನಾರ್ಹ.
ಕಳೆದ ಹಲವು ದಿನಗಳಿಂದ ಕೋರ್ಟ್ನಲ್ಲಿ ತಮ್ಮ ಚಿತ್ರದ ಬಿಡುಗಡೆಗಾಗಿ ತೀವ್ರ ಕಾನೂನು ಹೋರಾಟ ನಡೆಸುತ್ತಿದ್ದ ಚಿತ್ರತಂಡಕ್ಕೆ ಮೊದಲಿಗೆ ಸುಪ್ರೀಂ ಕೋರ್ಟ್ನಲ್ಲಿಯೂ ಅನುಮತಿ ಸಿಕ್ಕಿರಲಿಲ್ಲ. ಆದರೆ, ಚಿತ್ರದ ರಿಲೀಸ್ಗೆ ತಡೆಯೊಡ್ಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಿದ್ದ ನಿರ್ಮಾಪಕರಿಗೆ ಇದೀಗ ಅಸ್ತು ಎಂದಿರುವ ಸುಪ್ರೀಂ, ಸಿನಿಮಾ ರಿಲೀಸ್ ಮಾಡುವುದರ ಬಗ್ಗೆ ಸರಿಯಾಗಿ ಪರಿಶೀಲಿಸಿ, ಕೇಂದ್ರ ಸರ್ಕಾರದ ನಿಲುವುಗಳೇನು ಎಂಬುದನ್ನು ತಿಳಿದುಕೊಳ್ಳಿ ಎಂದು ಪ್ರಕರಣವನ್ನು ಮತ್ತೇ ಹೈಕೋರ್ಟ್ ಅಂಗಳಕ್ಕೆ ಹಾಕಿದೆ.
ಕಳೆದ 12 ದಿನಗಳಿಂದ ನ್ಯಾಯಾಲಯದ ಅಂಗಳದಲ್ಲಿರುವ ಈ ಪ್ರಕರಣ ಇನ್ನೂ ಇತ್ಯರ್ಥಗೊಳ್ಳದ ಹಿನ್ನಲೆ ಸುಪ್ರೀಂ ಕೋರ್ಟ್, ಸಿನಿಮಾ ರಿಲೀಸ್ಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣವು ದೆಹಲಿ ಹೈಕೋರ್ಟ್ನಲ್ಲಿ ಇತ್ಯರ್ಥಗೊಳ್ಳಲ್ಲಿ. ಕೇಂದ್ರ ಸರ್ಕಾರದ ನಿಲುವುಗಳೇನು? ಎಂಬುದನ್ನು ತಿಳಿದುಕೊಂಡು, ಸೋಮವಾರ (ಜು.28) ಆದೇಶ ನೀಡಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇನ್ನು 'ಸುಪ್ರೀಂ' ಕೊಟ್ಟ ಆದೇಶ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಭರತ್ ಶ್ರಿನೇಟ್, "ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ ಮತ್ತು ಆಗಸ್ಟ್ 8ರಂದು ನಮ್ಮ ಸಿನಿಮಾ ಬಿಡುಗಡೆಗೊಳಿಸಲು ಸಿದ್ಧರಿದ್ದೇವೆ. ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್ ಚಿತ್ರದ ಪ್ರಚಾರಗಳನ್ನು ಪ್ರಾರಂಭಿಸಲಿದ್ದು, ಜಾಗತಿಕವಾಗಿ ಸಿನಿಮಾವನ್ನು ಏಕಕಾಲಕ್ಕೆ ರಿಲೀಸ್ ಮಾಡಲಿದೆ. ಸತ್ಯಕ್ಕೆ ಎಂದಿಗೂ ಜಯವಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).