

ಮೈಸೂರು: ದೇಶದಲ್ಲಿ 2030ರ ಹೊತ್ತಿಗೆ ಪ್ರತಿನಿತ್ಯ 5 ಬಿಲಿಯನ್ ಆಹಾರದ ಅವಶ್ಯಕತೆ ನಿರ್ಮಾಣವಾಗಲಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಆಹಾರ ಪೂರೈಕೆ ಮಾಡುವುದು ಎಲ್ಲರ ಮುಂದಿರುವ ಸವಾಲಾಗಿದೆ ಎಂದು ಸಿಎಸ್‌ಐಅರ್-ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಡಾ.ವಿ.ಪ್ರಕಾಶ್ ಹೇಳಿದರು.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ‘ಪ್ಲಾಂಟ್ ಪ್ರೋಟಿನ್ಸ್ : ಸ್ಟ್ರಕ್ಚರ್ ಫಂಕ್ಷನ್, ಹ್ಯೂಮನ್ ನ್ಯೂಟ್ರೀಷನ್ ಆ್ಯಂಡ್ ಟೆಕ್ನಾಲಜಿ ಅಡ್ವಾನ್ಸಸ್’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಜನರು ಪ್ರತಿನಿತ್ಯ ಸೇವಿಸುವ ಆಹಾರ, ಸಭೆ, ಸಮಾರಂಭ, ವಿವಾಹ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡು ಪ್ರತಿನಿತ್ಯ 5 ಬಿಲಿಯನ್ ಆಹಾರದ ಅವಶ್ಯಕತೆ ಇದೆ. ಒಂದು ಆಹಾರ ಉತ್ಪಾದನಾ ಕಾರ್ಖಾನೆಯಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಾವಿರಾರು ಕಾರ್ಖಾನೆಗಳ ಅವಶ್ಯಕತೆ ಇದೆ. ಪ್ರಸ್ತುತ ಜನರು ‘ರೆಡಿ ಟು ಈಟ್’ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಯಲ್ಲಿ ಆಹಾರ ತಂತ್ರಜ್ಞಾನಗಳು ಹಾಗೂ ಆಹಾರ ತಾಂತ್ರಿಕ ಸಂಶೋಧನಾಲಯಗಳು, ಕಾರ್ಖಾನೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜೀವರಸಾನಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಸ್. ಸಾವಿತ್ರಿ ಮಾತನಾಡಿ, ವೈರಸ್‌ಗಳು ಕೃಷಿ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ವೈರಸ್ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದ್ದು, ಇಲ್ಲವಾದಲ್ಲಿ ಆಹಾರ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ವೈರಸ್ ಕಾರಣದಿಂದ ವಾರ್ಷಿಕ ಶೇ.10 ರಿಂದ 30 ರಷ್ಟು ಪ್ರಮಾಣ ಕೃಷಿ ಇಳುವರಿ ಕಡಿಮೆ ಆಗುತ್ತಿದೆ. ದೇಶ ವಾರ್ಷಿಕ 15 ಬಿಲಿಯನ್ ಡಾಲರ್‌ನಷ್ಟು ಕೃಷಿ ಉತ್ಪಾದನಾ ನಷ್ಟವನ್ನು ಅನುಭವಿಸುತ್ತಿದೆ. ಬಾಳೆ, ಭತ್ತ, ಟೊಮ್ಯಾಟೋ ಮುಂತಾದ ಆಹಾರ ಬೆಳೆಗಳಿಗೆ ವೈರಸ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಬಾಳೆಗೆ ಕಾಣಿಸಿಕೊಂಡ ವೈರಸ್‌ನಿಂದ 2007 ರಿಂದ 2010ರ ಅವಧಿಯಲ್ಲಿ 350 ಕೋಟಿ ರೂ.ನಷ್ಟ ಉಂಟಾಗಿತ್ತು. ಭತ್ತದ ವೈರಸ್‌ನಿಂದ ವಾರ್ಷಿಕ 1 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗುತ್ತಿದೆ. ಈ ನಷ್ಟವನ್ನು ತಡೆಗಟ್ಟುವ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭ ಮೆಕ್ ಡೊನಾಲ್ಡ್‌ನ ಬರ್ಗರ್‌ಗೆ ಬಳಕೆ ಮಾಡಲು ಸಿಎಫ್‌ಟಿಆರ್‌ಐ ತಯಾರಿಸಿದ ‘ಪ್ರೋಟಿನ್ ಸ್ಲೈಸ್’ಅನ್ನು ಬಿಡುಗಡೆ ಮಾಡಲಾಯಿತು ಹಾಗೂ ಗುಡ್‌ಫುಡ್ ಇನ್‌ಸ್ಟಿಟ್ಯೂಟ್‌ನೊಂದಿಗೆ ಸಿಎಫ್‌ಟಿಆರ್‌ಐ ‘ಸಂಶೋಧನೆ ಮತ್ತು ಅಭಿವೃದ್ಧಿ’ ವಿಷಯವಾಗಿ ಒಡಂಬಡಿಕೆಗೆ ಸಹಿ ಹಾಕಿತು. ವೇದಿಕೆಯಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಇದ್ದರು.