ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಾಡೋಜ ಜಿ. ಶಂಕರ್ ನೇತೃತ್ವದಲ್ಲಿ 4ನೇ ಬಾರಿಗೆ ಅದ್ದೂರಿ ದಸರಾ ಮಹೋತ್ಸವ| Uchilla Dasara

Untitled design - 2025-09-28T103552.530
Published on

Uchilla Dasara: ಉಡುಜಿ ಜಿಲ್ಲೆಯ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಜಿ. ಶಂಕರ್ ನೇತೃತ್ವದಲ್ಲಿ ನಾಲ್ಕನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಭಕ್ತಾಭಿಮಾನಿಗಳು ಹಾಗೂ ಮೊಗವೀರ ಸಮಾಜದ ಸಹಕಾರ ಸಹಯೋಗದೊಂದಿಗೆ ೧೧ ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಫರ್ಧೆಗಳ ಮೂಲಕ ಉಚ್ಚಿಲ ದಸರಾ ವೈಭವಯುತವಾಗಿ ನಡೆಯುತ್ತಿದೆ.

ಸೆ.೨೨ರಂದು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಗಣ್ಯರ ಸಮ್ಮುಖದಲ್ಲಿ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು. ದಸರಾ ವೀಕ್ಷಿಸಲು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಬಂದಂತಹ ಭಕ್ತರಿಗೆ ವ್ಯವಸ್ಥಿತವಾಗಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅ. 2ರಂದು ವೈಭವಯುತವಾದ ವಿವಿಧ ಸ್ತಬ್ಧಚಿತ್ರಗಳೊಂದಿಗೆ ಶಾರದ ಮಾತೆ ಸಹಿತ ನವದುರ್ಗೆಯರ ಜಲಸ್ತಂಭನ ಶೋಭಾಯಾತ್ರೆಗೆ ಸಿದ್ದತೆಗಳು ನಡೆದಿವೆ.

ನವರಾತ್ರಿ ಮತ್ತು ದಸರಾ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಿವಿಧ ಸ್ಪರ್ಧೆಗಳು ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ನವದುರ್ಗೆಯರು ಮತ್ತು ಶಾರದಾ ಮಾತೆಗೆ ತ್ರಿಕಾಲ ಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ

ದಸರಾ ಮಹೋತ್ಸವ ಅಂಗವಾಗಿ ಜೋಡಿಸಿರುವ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳ ೧೧ ಕಿಮೀ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಉಚ್ಚಿಲದಿಂದ ಪಡುಬಿದ್ರಿಯವರೆಗೆ, ಪಡುಬಿದ್ರಿಯಿಂದ ಕಾಪು ಜಂಕ್ಷನ್, ಕೊಪ್ಪಲಂಗಡಿಯಿಂದ ಕಾಪು ಬೀಚ್‌ವರೆಗೆ ರಸ್ತೆಯುದ್ದಕ್ಕೂ ಜೋಡಿಸಿರುವ ವಿದ್ಯುತ್ ದೀಪಾಲಂಕಾರ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ದಸರಾ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಒಂದೆಡೆ ಗಮನ ಸೆಳೆಯುತ್ತಿದ್ದರೆ, ಶಾಶ್ವತ ಕಟ್ಟಡ ನಿರ್ಮಿಸಿ ಅಲ್ಲಿ ವ್ಯವಸ್ಥಿತವಾಗಿ ಆಯೋಜಿಸಿರುವ ವಸ್ತುಪ್ರದರ್ಶನ ಜನಮನ್ನಣೆಗೆ ಪಾತ್ರವಾಗುತ್ತಿದೆ. ಆದ್ಯತೆಯಲ್ಲಿ ಆಯ್ದ ತಂಡಗಳಿಂದ ವ್ಯವಸ್ಥಿತ ಪ್ರದರ್ಶನಕ್ಕೆ ಜೋಡಣೆ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ತೆಂಗಿನ ಸೋಗೆಯಿಂದ ನಿರ್ಮಿಸಿರುವ ವಸ್ತು ಪ್ರದರ್ಶನ ಮಳಿಗೆ ಪ್ರವೇಶ ದ್ವಾರವೇ ಅಕರ್ಷಣೀಯವಾಗಿ ಜನರನ್ನು ಸೆಳೆಯುವಂತಿದೆ. ಪ್ರವೇಶ ದ್ವಾರದೊಳಗೆ ಸಾಗುತ್ತಿದ್ದಂತೆ ಜೋಡಿಸಿರುವ ಫಲಪುಷ್ಪ ಪ್ರದರ್ಶನ, ತರಕಾರಿಗಳಿಂದ ರಚಿಸಿದ ಕಲಾಕೃತಿಗಳು ಗಮನ ಸೆಳೆಯುತ್ತಿದ್ದರೆ ಸೆಲ್ಫಿಪ್ರಿಯರನ್ನು ಚಿತ್ರೀಕರಣಕ್ಕೆ ಆಕರ್ಷಿಸುವಂತಿದೆ.

ಸಾರ್ವಜನಿಕ ಜಾಗೃತಿ ಕಲಾಕೃತಿ

ಆವೆ ಮಣ್ಣಿನ ಕಲಾವಿದ ವೆಂಕಿ ಪಲಿಮಾರು ಅವರ ಮಕ್ಕಳು ಹಾಗೂ ಯುವಜನರಲ್ಲಿನ ಮೊಬೈಲ್ ಬಳಕೆ ಗೀಳು ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಜಲಚರಗಳ, ಆಮೆ ಸಂತತಿ, ಹಕ್ಕಿಗಳ ಸಂತತಿಗಳ ರಕ್ಷಣೆ, ಧೂಮಪಾನ ದುಷ್ಪರಿಣಾಮ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ, ಕೌಟುಂಬಿಕ ಜಾಗೃತಿ ಕಲಾಕೃತಿಗಳು, ವ್ಯಸನಮುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಸ್ವಚ್ಚ ಭಾರತ್, ಜಂಕ್ ಪುಡ್ ನಿಷೇಧ, ಮಲೇರಿಯಾ ಜಾಗೃತಿ ಕಲಾಕೃತಿಗಳ ಜೋಡಣೆ ಜನ ಮಾಸದ ಮೇಲೆ ಪ್ರಭಾವ ಬೀರುತ್ತಿದೆ.

ವಿಶೇಷಚೇತನ ಕಲಾವಿದರಾದ ಗಣೇಶ್ ಪಂಜಿಮಾರು, ಸುಮ ಪಂಜಿಮಾರು ಅವರ ಕಲಾಕೃತಿಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ಆಶಾ ನಿಲಯ ವಿಶೇಷ ಶಿಕ್ಷಣ ಸಂಸ್ಥೆ, ಕಾರುಣ್ಯ ವಿಶೇಷ ಮಕ್ಕಳ ಶಾಲೆಯ ಪ್ರತಿಭೆಗಳ ಕೈಯಲ್ಲಿ ಅರಳಿದ ಕುಸುರಿಗಳು ಗಮನ ಸೆಳೆಯುತ್ತಿವೆ.

ದೈವಾರಾಧನೆಯ ದೈವಾರಾಧಕರ ಮನೆ, ಪಾರಂಪರಿಕ ದೈವಾರಾಧನೆಯ ಚಿತ್ರಣ, ದೈವಾರಾಧನೆೆಯ ಸಿರಿ ಒಲಿ ಪರಿಕರಗಳು, ಮುಟ್ಟಾಳೆಯನ್ನು ಸ್ಥಳದಲ್ಲೆ ತಯಾರಿಸಿ ಪ್ರದರ್ಶಿಸಲಾಗುತ್ತಿದೆ. ಹಳ್ಳಿ ಬದುಕಿನ ಛಾಯಾಚಿತ್ರ ಪ್ರದರ್ಶನ, ಮಂಡಲ ಆರ್ಟ್, ಕುಪ್ಪಿ ಆರ್ಟ್, ಕ್ರಾಫ್ಟ್ ಕಿವಿಯೋಲೆ ಆಭರಣಗಳು, ಬಾಬು ಕೊರಗ ಕಡ್ತಲ ಅವರ ಬುಟ್ಟಿ ತಯಾರಿಕೆ, ಹೆಡಿಗೆ, ಗೊರಬು, ಹೆಡಿಗೆ, ತಡ್ಪೆ, ಗೆರಸೆ, ತಟ್ಟಿಕುಡ್ಪು, ಗೂಡು ದೀಪ, ಹಣ್ಣುಕಾಯಿ ಬುಟ್ಟಿ, ಪ್ರಾತ್ಯಕ್ಷಿಕೆಗಳ ಜೊತೆ ಳಿವೆ.ಹಳೆ ಕಾಲದ ಗೊರಬಿನ ಜೊತೆಗೆ ಸೆಲ್ಪಿ ಬೂತ್ ಕೈಬೀಸಿ ಕರೆಯುತ್ತಿದೆ.

ಮೊಗವೀರ ಮಹಾಜನ ಸಂಘದ ಸಮಗ್ರ ದಾಖಲೆ

ವಸ್ತು ಪ್ರದರ್ಶನದಲ್ಲಿ ಸಂಶೋಧಕ ವಿ.ಕೆ. ಯಾದವ್ ಸಂಗ್ರಹಿಸಿಟ್ಟಿರುವ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ೧೦೧ ವರ್ಷಗಳ ಸಾಧನೆಯ ಕಿರುನೋಟ, ಸಾಧಕರ ಬಗ್ಗೆ ದಾಖಲೆ, ಮೊಗವೀರ ಸಂಘಟನೆಯ ಬಗ್ಗೆ ಸಂಕ್ಷಿಪ್ತ ಇತಿಹಾಸ, ಸ್ವಾತಂತ್ರ್ಯ ಪೂರ್ವದ ಕಥೆಗಳು, ತುಳು ಗ್ರೀಕ್ ನಾಟಕ, ತುಳು ಭಾಷೆ, ಮೊಗವೀರ ಸಮಾಜದ ಗುರಿಕಾರ ಪರಂಪರೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯಿದ್ದು, ಸಂಶೋಧನಾಕಾರರಿಗೆ ಆಸಕ್ತಿ ತಳೆಯುವಂತಿದೆ.

ಪಕ್ಷಿ ಪ್ರದರ್ಶನ ಮತ್ತು ಮಾರಾಟ

ಎರಡೂವರೆ ಲಕ್ಷ ರೂ. ವೆಚ್ಚದ ಮಕಾವ್, 2.20 ಲಕ್ಷ ರೂ. ಮೌಲ್ಯದ ಅಂಬ್ರಲ್ಲಾ ಪ್ರದರ್ಶನಕ್ಕಿವೆ. ಕೊಕ್ಯಾಟೋದಿಂದ ೪೫೦ ರೂ. ವರೆಗಿನ ಪಕ್ಷಿಗಳ ಪ್ರದರ್ಶನ ಮತ್ತು ಮಾರಾಟ, ೩೦ ಜಾತಿಯ ಪಾರಿವಾಳ, ೨೦ ಜಾತಿಯ ಕೋಳಿ, ೪೦ ಜಾತಿಯ ಗಿಳಿಗಳ ಸಹಿತ ೮೦ ಜಾತಿಯ ವಿವಿಧ ಪಕ್ಷಿಗಳು ಪ್ರದರ್ಶನದಲ್ಲಿವೆ. ಪಕ್ಷಿ ಪ್ರಿಯರಿಗಾಗಿ ತೆರೆದಿರುವ ಸೆಲ್ಫಿ ಕೌಂಟರ್ ಜನ ಮುಗಿಬೀಳುವಂತಿದೆ. ಮಳೆ ನೀರು ಕೊಯ್ಲು, ನೀರಿಂಗಿಸುವಿಕೆ, ನೇಕಾರಿಕೆ, ಉಡುಪಿ ಕೈಮಗ್ಗ ಸೀರೆ ತಯಾರಿ ಮತ್ತು ಮಾರಾಟ, ಮರದ ಮಂತ್, ಪುಸ್ತಕ ಮಳಿಗೆ, ಪೈಂಟಿಂಗ್, ಮಡಿಕೆ ಚಿತ್ತಾರ ಪ್ರದರ್ಶನ, ಕಮ್ಮಾರಿಕೆ, ಕುಂಬಾರಿಕೆ, ಕೋಣದ ಗಾಣದಲ್ಲಿ ಕಬ್ಬಿನ ಹಾಲು ತೆಗೆಯುವ ಪ್ರಾತ್ಯಕ್ಷಿಕೆ, ಮೀನುಗಾರಿಕಾ ಇಲಾಖೆಯೆ ಸಹಯೋಗದ ಸಮುದ್ರ ಮೀನುಗಳ ಸಹಿತ ಅಲಂಕಾರಿಕಾ ಮೀನುಗಳ ಪ್ರದರ್ಶನ ಜನಾಕರ್ಷಣೆ ಪಡೆಯುವಂತಿದೆ. ಒಟ್ಟಿನಲ್ಲಿ ಈ ಎಲ್ಲ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಿರುವ ಯತೀಶ್ ಕಿವಿಯೂರು ಮತ್ತು ಯಶೋಧರ್ ಮತ್ತವರ ತಂಡದ ಪ್ರಯತ್ನವೂ ಜನ ಮೆಚ್ಚುಗೆ ಗಳಿಸಿದೆ.

ವಿಶ್ವಪ್ರಸಿದ್ಧ ಶೋಭಾಯಾತ್ರೆಗೆ ಸಿದ್ದತೆ

ಅ. 2ರಂದು ವಿವಿಧ ಸ್ತಬ್ಧಚಿತ್ರಗಳೊಂದಿಗೆ ಶಾರದ ಮಾತೆ ಸಹಿತ ನವದುರ್ಗೆಯರ ವೈಭವಯುತವಾದ ಜಲಸ್ತಂಭನ ಶೋಭಾಯಾತ್ರೆಗೆ ಸಿದ್ದತೆಗಳು ನಡೆದಿವೆ. ಮಧ್ಯಾಹ್ನ ವಿಸರ್ಜನಾ ಪೂಜೆ ಬಳಿಕ ಹೊರಡುವ ಅಂಬಾರಿ ಹೊತ್ತ ಆನೆ , ಶಾರದಾ ಮಾತೆ ಹಾಗೂ ನವದುರ್ಗೆಯರಿಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ನೆರವೇರಲಿದೆ. ಶೋಭಾಯಾತ್ರೆ ಉಚ್ಚಿಲದಿಂದ ಸಾಗಿ ಎರ್ಮಾಳಿಗಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಪ್ಪಲಗಂಡಿ ಮೂಲಕ ಹಾದು ಕಾಪು ದೀಪಸ್ತಂಬದ ಬಳಿ ಮೂರ್ತಿಗಳ ಜಲಸ್ತಂಭನ ಮಾಡಲಾಗುತ್ತಿದೆ. ಅಂದು ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ವಿದ್ಯುತ್ ದೀಪಾಲಂಕಾರ ನಡೆಯಲಿದೆ.

ಕಾಶಿಯಿಂದ ಆಗಮಿಸುವ ಅರ್ಚಕರಿಂದ ಕಾಶಿಯ ಗಂಗಾ ನದಿಯ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ಆಯೋಜನೆ ಮಾಡಲಾಗಿದೆ. ರಾತ್ರಿ ಸಂಗೀತ ಕಾರ್ಯಕ್ರಮವು ಜನರಿಗೆ ಮುದ ನೀಡಲಿವೆ ಎಂದು ಸಮಿತಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net