ವಿಜಯ್ ರ್‍ಯಾಲಿ ಕಾಲ್ತುಳಿತ: ಘಟನೆ ಬಗ್ಗೆ ಯಾವುದೇ ರಾಜಕೀಯ ಇಲ್ಲ, ಆಯೋಗದ ವರದಿ ಆಧರಿಸಿ ಕ್ರಮ; ಸಿಎಂ ಎಂ.ಕೆ.ಸ್ಟಾಲಿನ್| M K Stalin

Untitled design - 2025-09-28T083017.941
Published on

M K Stalin: ಕರೂರ್​ನಲ್ಲಿ ನಟ ದಳಪತಿ ವಿಜಯ್ ರಾಜಕೀಯ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಮಕ್ಕಳು ಸೇರಿ 39 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ನಾವು ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ. ನ್ಯಾಯಾಂಗ ತನಿಖೆ ನಡೆಯಲಿದ್ದು, ಅದರ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಭಾನುವಾರ(ಸೆ. 28) ಹೇಳಿದ್ದಾರೆ.

ಕರೂರ್​ನಲ್ಲಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಕೆ. ಸ್ಟಾಲಿನ್, ನಮ್ಮ ರಾಜ್ಯದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಪ್ರಾಣ ಕಳೆದುಕೊಂಡ ಘಟನೆ ಇದುವರೆಗೆ ನಡೆದಿಲ್ಲ. ಈಗ ನಾನು ರಾಜಕೀಯವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಯಾವುದೇ ಕ್ರಮವು ನ್ಯಾಯಾಂಗ ತನಿಖೆಯ ವರದಿಯನ್ನು ಆಧರಿಸಿರುತ್ತದೆ ಎಂದು ಹೇಳಿದರು.

ಘಟನೆ ಬಗ್ಗೆ ಕುರಿತಂತೆ ನಟ ವಿಜಯ್ ಬಂಧನದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಪಕ್ಷ ನಡೆಸಿದ ಕಾರ್ಯಕ್ರಮದಿಂದಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮತ್ತೆ ಎಲ್ಲಿಯೂ ಸಂಭವಿಸಬಾರದು ಎಂದು ಟಿವಿಕೆ ಪಕ್ಷವನ್ನು ಹೆಸರಿಸದೇ ಸಿಎಂ ಹೇಳಿದ್ದಾರೆ.

ಘಟನೆಯಲ್ಲಿ ಒಟ್ಟು 39 ಮಂದಿ ಸಾವನ್ನಪ್ಪಿದ್ದಾರೆ. 13 ಪುರುಷರು, 17 ಮಹಿಳೆಯರು, ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹುಡುಗಿಯರು ಸೇರಿದಂತೆ ಆರು ಮಕ್ಕಳು ಮೃತಪಟ್ಟಿದ್ದಾರೆ. 51 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅದರಲ್ಲಿ 26 ಪುರುಷರು ಮತ್ತು 25 ಮಹಿಳೆಯರು ಎಂದು ತಿಳಿಸಿದ್ದಾರೆ.

ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರನ್ನು ಘೋಷಿಸಿದ್ದು,  ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರುಣಾ ಜಗದೀಶನ್ ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net