

M K Stalin: ತಮಿಳುನಾಡಿನಲ್ಲಿ ಕರೂರ್ನಲ್ಲಿ ಶನಿವಾರ(ಸೆ. 27) ಸಂಜೆ ನಟ ದಳಪತಿ ವಿಜಯ್ ರಾಜಕೀಯ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 39 ಮಂದಿ ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಸಿಎಂ ಎಂ.ಕೆ.ಸ್ಟಾಲಿನ್ ತಡರಾತ್ರಿಯೇ ಕರೂರ್‌ಗೆ ಭೇಟಿ ನೀಡಿದ್ದು, ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಪರಾಮರ್ಶಿಸಿದ್ದಾರೆ.
ಕಾಲ್ತುಳಿತ ಘಟನೆಯ ನಂತರ, ಅವರು ಚೆನ್ನೈನಿಂದ ತಿರುಚ್ಚಿಗೆ ಬಂದಿಳಿದು ರಸ್ತೆ ಮೂಲಕ ಕರೂರ್‌ಗೆ ತೆರಳಿದರು. ತಡರಾತ್ರಿ ಕರೂರ್ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಸ್ಟಾಲಿನ್, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈಗಾಗಲೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರನ್ನು ಘೋಷಿಸಿದ್ದು, ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ.
ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿ ಆದೇಶಿಸಿದ್ದಾರೆ. ಈ ಆಯೋಗವು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. (ಏಜೆನ್ಸೀಸ್)