ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಮನವಿ

THYAGARTHI( protest
ನಾಡವಳ್ಳಿ ಗ್ರಾಮದಲ್ಲಿ ಅಕ್ರಮ ಸಾಗುವಳಿ ತಡೆಯಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತ್ಯಾಗರ್ತಿ ಪಿಡಿಒಗೆ ಮನವಿ ಸಲ್ಲಿಸಿದರು. ಮಿಕ್ಸಿ ಮಂಜು, ದುರ್ಗಪ್ಪ, ಬಸವರಾಜಪ್ಪ, ನಾಗರಾಜ್, ವಿರೂಪಾಕ್ಷ, ರಾಮಚಂದ್ರ, ಮಂಜಪ್ಪ ಇತರರಿದ್ದರು
Published on

ತ್ಯಾಗರ್ತಿ: ನಾಡವಳ್ಳಿ ಗ್ರಾಮ ಠಾಣಾ ಜಮೀನು ಒತ್ತುವರಿ ತೆರವು ಗೊಳಿಸಲು ಒತ್ತಾಯಿಸಿ ನಾಡವಳ್ಳಿ ಗ್ರಾಮಸ್ಥರು ಮಂಗಳವಾರ ತ್ಯಾಗರ್ತಿ ಗ್ರಾಪಂ ಕಚೆೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಮಿಕ್ಸಿ ಮಂಜು ಮಾತನಾಡಿ, ನಾಡವಳ್ಳಿ ಗ್ರಾಮದ ಗ್ರಾಮಠಾಣಾ ಜಮೀನು ಒತ್ತುವರಿ ಮಾಡಲಾಗಿದ್ದು ಅದನ್ನು ಗ್ರಾಪಂಯಿಂದ ತೆರವುಗೊಳಿಸದಿದ್ದರೆ ತಾಲೂಕು ಕೇಂದ್ರದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ಐದು ವರ್ಷಗಳಿಂದ ಊರಿನ ಆಸ್ತಿ ಉಳಿಸಲು ಹೋರಾಟ ಮಾಡಲಾಗುತ್ತಿದೆ. ಊರಲ್ಲಿ ಮನೆ ಕಟ್ಟಲು ನಿವೇಶನ ಹಾಗೂ ದೇವಾಲಯದ ಅಭಿವೃದ್ಧಿಗೆ ಗ್ರಾಮದಲ್ಲಿ 40 ಎಕರೆ ಗ್ರಾಮಠಾಣಾ ಗೋಮಾಳ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ ಊರಿನವರೇ ಆದ ಕೆಲವರು ತಮ್ಮ ಅಧಿಕಾರದ ಪ್ರಭಾವ ಬಳಸಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಲಾಗಿರುವ ಜಮೀನಿನಲ್ಲಿ ಅಕ್ರಮವಾಗಿ ಅಡಕೆ ತೋಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಸಾಗುವಳಿ ಮಾಡುತ್ತಿರುವ ಬಗ್ಗೆ ಈಗಾಗಲೇ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಗ್ರಾಪಂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಠಾಣಾ ಜಾಗ ಸಂಪೂರ್ಣ ಸರ್ವೇ ಮಾಡಿಸಿ ಅಕ್ರಮ ಸಾಗುವಳಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತ್ಯಾಗರ್ತಿ ಪಿಡಿಒಗೆ ಮನವಿ ನೀಡಿದರು.
ಗ್ರಾಮದ ಪ್ರಮುಖರಾದ ದುರ್ಗಪ್ಪ, ಬಸವರಾಜಪ್ಪ, ನಾಗರಾಜ, ಎಚ್.ಬಿ. ಮಂಜಪ್ಪ, ವಿರುಪಾಕ್ಷ, ರಾಮಚಂದ್ರ, ಪರಮೇಶಿ, ರವೀಂದ್ರ, ಲಿಂಗಮೂರ್ತಿ, ರಘು, ಹುಚ್ಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net