ಮುಂಬೈನಲ್ಲಿ ಎರಡು ಜಿಕಾ ವೈರಸ್ ಪ್ರಕರಣಗಳು ಪತ್ತೆ!

Untitled design - 2023-09-05T214902.446
Published on

ಮುಂಬೈ: ಜಿಕಾ ವೈರಸ್‌ನ ಎರಡನೇ ಪ್ರಕರಣ ಮುಂಬೈನಲ್ಲಿ ಪತ್ತೆಯಾದ ಬಗ್ಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮಂಗಳವಾರ (ಸೆಪ್ಟಂಬರ್ 05) ಅಧಿಕೃತವಾಗಿ ತಿಳಿಸಿದೆ. ಈ ಹಿಂದೆ ಮೊದಲ ಪ್ರಕರಣ ಆಗಸ್ಟ್ 23 ರಂದು ವರದಿಯಾಗಿತ್ತು.

ಜಿಕಾ ವೈರಸ್​ಗೆ ತುತ್ತಾದ ಎರಡನೇ ರೋಗಿಯು ಪೂರ್ವ ಮುಂಬೈನ ಉಪನಗರ ಕುರ್ಲಾದ 15 ವರ್ಷದ ಬಾಲಕಿಯಾಗಿದ್ದು, ಈ ಕೇಸ್​ ನಾಗರಿಕ ಸಂಸ್ಥೆಯ ಎಲ್-ವಾರ್ಡ್‌ನ ವ್ಯಾಪ್ತಿಗೆ ಸೇರಿದೆ ಎಂದು ಬಿಎಂಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇತರ ರೋಗಗಳನ್ನು ಹೊಂದಿರುವ ಬಾಲಕಿ ಆಗಸ್ಟ್ 20 ರಿಂದ ಜ್ವರ ಮತ್ತು ತಲೆನೋವಿನ ಬಗ್ಗೆ ದೂರು ನೀಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ.

ಮಂಗಳವಾರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ನಿಗಮ ತಿಳಿಸಿದೆ. ಜಿಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಈ ಸೋಂಕು ಗರ್ಭಾವಸ್ಥೆಯಲ್ಲಿ ಮಗುವಿನಲ್ಲಿ ಕೆಲವು ಜನ್ಮ ದೋಷಗಳನ್ನು ಉಂಟುಮಾಡಬಹುದು. ಜ್ವರ, ತಲೆನೋವು, ಕೀಲು ನೋವು, ಕೆಂಪಾದ ಕಣ್ಣುಗಳು ಮತ್ತು ಸ್ನಾಯು ನೋವಿನಂತಹ ಲಕ್ಷಣಗಳನ್ನು ಹೊಂದಿದೆ. ಇದಕ್ಕೆ ಸದ್ಯ ಯಾವುದೇ ಲಸಿಕೆ ಅಥವಾ ಔಷಧಿಯಿಲ್ಲ ಎಂದು ಹೇಳಲಾಗಿದೆ.

ಚೆಂಬೂರಿನ 79 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಒಳಗಾದ ಬೆನ್ನಲ್ಲೇ ನಗರದಲ್ಲಿ ಮೊದಲ ಜಿಕಾ ಪ್ರಕರಣವನ್ನು ಆಗಸ್ಟ್ 23 ರಂದು ಘೋಷಿಸಿದ ಬಿಎಂಸಿ, ಸೋಂಕಿನಿಂದ ವ್ಯಕ್ತಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net