ಕತ್ತಲೆ ಭಾಗ್ಯ ಕುರುಣಿಸಿದ ಕಾಂಗ್ರೆಸ್ ಸರ್ಕಾರ; ಮಾಜಿ ಇಂಧನ ಸಚಿವ ಟೀಕೆ

power-cut
Published on

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. 5 ಗ್ಯಾರಂಟಿಗಳನ್ನು ಬಿಟ್ಟು ಬೇರಾವುದರೆಡೆಗೂ ಗಮನ ಕೊಡದ ಪರಿಣಾಮ ಕರ್ನಾಟಕವಿಂದು ಕತ್ತಲಾಗುತ್ತಿದೆ. ಕತ್ತಲೆಯ ದಿನಗಳು ಆರಂಭವಾಗಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಕತ್ತಲೆ ಭಾಗ್ಯ ಕರುಣಿಸಿದಂತೆೆ ಎಂದು ಮಾಜಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ, ದುಬಾರಿ ಬೆಲೆ ತೆತ್ತು ವಿದ್ಯುತ್ ಖರೀದಿಸಿದರೂ ಕತ್ತಲೆ ಭಾಗ್ಯ ನೀಡುತ್ತಿದೆ ಎಂದು ಹರಿಹಾಯ್ದರು.

ಮುಂದಾಲೋಚನೆ ಮಾಡದೇ ಇದ್ದುದರಿಂದ ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಪ್ರತಿ ಯುನಿಟ್‌ಗೆ 3 ರಿಂದ 5 ರೂ. ಬದಲು 8 ರಿಂದ 10 ರೂ. ದರ ಕೊಡಬೇಕಾಗಿದೆ. ಆಗಸ್ಟ್ ತಿಂಗಳಲ್ಲಿ ದುಬಾರಿ ಬೆಲೆ ತೆತ್ತು 593 ದಶಲಕ್ಷ ಯುನಿಟ್ ವಿದ್ಯುತ್ ಖರೀದಿಸಲಾಗಿದೆ ಎಂದು ವಿವರಿಸಿದರು.

ನಮ್ಮ ಸರ್ಕಾರವಿದ್ದಾಗ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ನೀಡುವಷ್ಟು ಸಾಮರ್ಥ್ಯವಿತ್ತು. ಇದೀಗ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯೂ ಆಗುತ್ತಿಲ್ಲ, ಬೇಡಿಕೆ ಹಾಗೂ ಪೂರೈಕೆ ನಡುವೆಯೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

ಕೈಗಾರಿಕೆಗಳಿಗೂ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದ್ದು, ಉದ್ಯಮಿಗಳು ಚಿಂತೆಗೀಡಾಗಿದ್ದಾರೆ. ಗ್ರಾಮೀಣ ಭಾಗದ ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಯಾರೂ ಕೇಳುವವರಿಲ್ಲ ಎಂದ ಅವರು ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ವಿದ್ಯುತ್ ಉಚಿತ ಎಂದಿದ್ದ ಸರ್ಕಾರವು ಒಂದೆಡೆ ಅನಿಯಮಿತ ಲೋಡ್ ಶಡ್ಡಿಂಗ್ ಮಾಡುತ್ತಿದೆ ಎಂದು ಹೇಳಿದರು.

ಕೃಷಿ ಪಂಪ್ ಸೆಟ್‌ಗಳಿಗೂ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಕೇವಲ ಎರಡು ಮೂರು ಗಂಟೆಗಳ ಕಾಲ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುತ್ತಿದೆ. ಇಲ್ಲಿ ಉಳಿಯುವ ಸಬ್ಸಿಡಿ ಹಣವನ್ನು ಗೃಹಜ್ಯೋತಿ ಯೋಜನೆಗೆ ಬಳಸಲು ಮುಂದಾಗಿದೆ ಎಂದು ಕುಟುಕಿದರು.

ಮಳೆ ಕೊರತೆ ಆದಾಗಲೇ ಸರ್ಕಾರ ಮುಂಜಾಗ್ರತೆ ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ಸೂಕ್ತ ರೀತಿಯಿಂದ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರವಾಗಿ 3 ಫೇಸ್ ವಿದ್ಯುತ್ ಕೊಡಬೇಕು. ಇಲ್ಲಿ ಖೋತಾ ಮಾಡಿ ಗೃಹಜ್ಯೋತಿ ಹೆಸರಿನಲ್ಲಿ ಜನರನ್ನು ಮರಳು ಮಾಡುವುದು ಬೇಡ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net