

ಸಿಯೋನಿ: ಅವರಿಬ್ಬರೂ ಸಹೋದರಿಯರು. ಅದರಲ್ಲೊಬ್ಬಳು ಅಪ್ರಾಪ್ತೆ. ಅಂದರೆ 16ರ ಬಾಲೆ. ಮತ್ತೊಬ್ಬಳು 18ರ ಯುವತಿ. ಇಬ್ಬರೂ ತಮ್ಮ ತಮ್ಮ ಪ್ರಿಯತಮರೊಂದಿಗೆ ಪ್ರಣಯದ ಉತ್ತುಂಗದಲ್ಲಿದ್ದರು.
ಹಾಗೊಂದು ದಿನ ಅವರಲ್ಲೊಬ್ಬ ಪ್ರೇಮಿ, ಪ್ರೇಮದ ಗುಂಗಲ್ಲಿ ತನ್ನ ಪ್ರಿಯತಮೆಗೆ ಕಳುಹಿಸುವ ಸಂದೇಶವನ್ನು ಅಚಾನಕ್ ಆಗಿ ಆಕೆಯ ತಂದೆಗೆ ಕಳುಹಿಸಿಬಿಟ್ಟಿದ್ದಾನೆ... ಆ ಸಂದೇಶವನ್ನು ಮನೆಯ ಸದಸ್ಯರೆಲ್ಲರೂ ನೋಡಿದ್ದಾರೆ. ಇದೊಂದು ಯಡವಟ್ಟು ಆ ಇಬ್ಬರೂ ಹುಡುಗಿಯರಿಗೆ ಮಾರಣಾಂತಿಕವಾಗಿದೆ.
ತಮ್ಮ ಪ್ರಣಯದ ಗುಟ್ಟು ರಟ್ಟಾಯಿತೆಂದು ನೊಂದ ಇಬ್ಬರು ಸಹೋದರಿಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ತಮ್ಮ ಕುಟುಂಬದವರಿಗೆ ತಮ್ಮ ಪ್ರೇಮದ ವಿಷಯ ತಿಳಿದಿದೆ ಎಂದು ಭಯಗೊಂಡ ಅವರು ಸೋಮವಾರ ಸಂಜೆ ಮನೆ ತೊರೆದಿದ್ದರು ಎಂದು ಅಧಿಕಾರಿ ಹೇಳಿದರು.
ಅವರಿಬ್ಬರಿಗಾಗಿ ಶೋಧ ಕಾರ್ಯ ನಂತರ, ಮರುದಿನ ಗ್ರಾಮದ ಹೊರಗಿನ ಬಾವಿಯಲ್ಲಿ ಅವರ ಶವಗಳು ಪತ್ತೆಯಾಗಿವೆ. ಇಬ್ಬರ ಶವಗಳು ಕೊಂಡ್ರಾ ಗ್ರಾಮದ ಬಾವಿಯಲ್ಲಿ ತೇಲುತ್ತಿರುವಂತೆ ಕಂಡುಬಂದಿದ್ದವೆಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಆ ಇಬ್ಬರೂ ಹುಡುಗಿಯರ ಪ್ರಿಯತಮರನ್ನು ಹುಡುಕಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.