

Jabalpur: ಮಧ್ಯಪ್ರದೇಶದ ಜಬಲ್‌ಪುರ ಮಿಲಿಟರಿ ಪ್ರದೇಶದ ಫೋಟೊ ತೆಗೆದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಶನಿವಾರ (ಮೇ.10) ವಶಕ್ಕೆ ಪಡೆದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಶುಕ್ರವಾರ ಮಧ್ಯಪ್ರದೇಶದ ಜಬಲ್ಪುರದ ಮಿಲಿಟರಿ ಪ್ರದೇಶದಲ್ಲಿ ಇಬ್ಬರು ಅನುಮಾನಾಸ್ಪದ ಯುವಕರನ್ನು ಬಂಧಿಸಲಾಗಿದೆ. ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಿಲಿಟರಿ ವಲಯದ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ವರದಿಯಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ ಅವರ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ನಂತರ ಒಬ್ಬ ಸೈನಿಕ ಅವರನ್ನು ಬಂಧಿಸಿದ್ದಾರೆ.
ಶಂಕಿತರನ್ನು ಆಯೇಷಾ ನಗರದ ಖಜ್ರಿ ಬೈಪಾಸ್ ನಿವಾಸಿ ಮೊಹಮ್ಮದ್ ಜುಬೇರ್ ಮತ್ತು ನ್ಯೂ ಆನಂದ್ ನಗರದ ನಿವಾಸಿ ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ. ಭದ್ರತಾ ಸಂಸ್ಥೆಗಳು ಪ್ರಸ್ತುತ ಅವರನ್ನು ವಿಚಾರಣೆ ನಡೆಸುತ್ತಿವೆ.
ಶುಕ್ರವಾರ ಸಂಜೆ, ಜುಬೇರ್ ಮತ್ತು ಅವನ ಸ್ನೇಹಿತ ಇರ್ಫಾನ್ ಮಿಲಿಟರಿ ಪ್ರದೇಶವನ್ನು ಪ್ರವೇಶಿಸಿದರು. ಅವರು ಬೈಕ್ನಲ್ಲಿ ಎಂಬಿ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿರುವ ದೇಶಮುಖ್ ಗೇಟ್ ತಲುಪಿ ಅಲ್ಲೇ ನಿಂತು ತಮ್ಮ ಮೊಬೈಲ್ನಲ್ಲಿ ಮಿಲಿಟರಿ ಪ್ರದೇಶದ ಫೋಟೋ ತೆಗಯಲು ಪ್ರಾರಂಭಿಸಿದ್ದಾರೆ, ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸೈನಿಕನೊಬ್ಬ ಅವರನ್ನು ಗಮನಿಸಿ ಇಬ್ಬರನ್ನೂ ಬಂಧಿಸಿ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ವಿಚಾರಣೆಯ ನಂತರ, ಇಬ್ಬರೂ ಶಂಕಿತರನ್ನು ಗೋರಾ ಬಜಾರ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)