ಮನೆ ಬಳಿ ಕೆಟ್ಟು ನಿಂತಿದ್ದ ಕಾರಿನ ಬಾಗಿಲು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!

Car
Published on

ಚೆನ್ನೈ: ಮಕ್ಕಳು ಕಾರಿನಲ್ಲಿ ಆಡುವಾಗ ಪಾಲಕರು ಎಚ್ಚರಿಕೆ ವಹಿಸುವುದು ತುಂಬಾನೇ ಅವಶ್ಯಕ. ಏನೆಲ್ಲಾ ಅವಘಡಗಳು ಸಂಭವಿಸಿವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಸ್ವಲ್ಪ ಯಾಮಾರಿದ್ರೂ ಏನಾಗಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.

ಕಾರಿನಲ್ಲಿ ಆಟವಾಡುತ್ತಿದ್ದ ಮಕ್ಕಳಿಬ್ಬರು ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಕುಲದೀಪ ಮಂಗಳಂನಲ್ಲಿ ಗುರುವಾರ ನಡೆದಿದೆ. ಮೃತರನ್ನು ವನಿತಾ (4) ಮತ್ತು ರಾಜಿ (7) ಎಂದು ಗುರುತಿಸಲಾಗಿದೆ. ತಮ್ಮ ಮನೆಯ ಪಕ್ಕದಲ್ಲಿ ಪಾರ್ಕ್​ ಮಾಡಲಾಗಿದ್ದ ಮಾರುತಿ ಸ್ವಿಫ್ಟ್​ ಕಾರಿನಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿನ ಬಾಗಿಲು ಲಾಕ್​ ಆಗಿ, ಸುಮಾರು 2 ಗಂಟೆಗಳ ಕಾಲ ಇಬ್ಬರು ಹೊರಬರಲಾಗದೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ಕಾರಿನಲ್ಲಿ ಸಮಸ್ಯೆ ಇದ್ದುದ್ದರಿಂದ ಮಾಲೀಕ ಒಂದೂವರೆ ವರ್ಷದಿಂದ ಕಾರನ್ನು ತೆಗೆಯದೇ ಒಂದೇ ಸ್ಥಳದಲ್ಲಿ ಪಾರ್ಕ್​ ಮಾಡಿದ್ದರು. ಮಕ್ಕಳು ಈ ಮುಂಚೆಯೂ ಕಾರಿನಲ್ಲಿ ಆಟವಾಡುತ್ತಿದ್ದರು. ಕಾರು ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದ ರಾಜಾ ಎಂಬುವರಿಗೆ ಸೇರಿದ್ದಾಗಿತ್ತು. ಎಂದಿನಂತೆಯೇ ಮಕ್ಕಳು ಕಾರಿನಲ್ಲಿ ಆಡಲು ತೆರಳಿದ್ದಾರೆ. ಆದರೆ, ಅವರ ದುರಾದೃಷ್ಟವಶಾತ್​ ಅಂದು ಕಾರು ಇದ್ದಕ್ಕಿದ್ದಂತೆ ಲಾಕ್​ ಆಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿದ್ದ ಮಕ್ಕಳಿಗೆ ಆಮ್ಲಜನಕ ಕೊರತೆಯಿಂದ ಉಸಿರಾಡಲು ತೊಂದರೆಯುಂಟಾಗಿ. ಇತ್ತ ಕಾರಿನ ಕಿಟಕಿಗಳು ಸಹ ಮುಚ್ಚಿದ್ದರಿಂದ ಎಷ್ಟೇ ಕೂಗಿಕೊಂಡರು ಯಾರಿಗೂ ಕೇಳಿಸಿಲ್ಲ. ಹೀಗಾಗಿ ಸಾಕಷ್ಟು ಒದ್ದಾಡಿ ಮಕ್ಕಳು ಕಾರಿನಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ಮನಲುರ್​​ಪೆಟ್ಟೈ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ ಆಟವಾಡಲು ಹೊರಹೋದ ಮಕ್ಕಳು ಮರಳಿ ಬರಲೇ ಇಲ್ಲವಲ್ಲ ಎಂದು ಗಾಬರಿಗೊಂಡ ಪಾಲಕರು ಅವರಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಸಮೀಪದಲ್ಲೇ ಇದ್ದ ಕಾರಿನ ಬಳಿ ಹೋಗಿ ನೋಡಿದಾಗ ಮಕ್ಕಳಿಬ್ಬರು ಪ್ರಜ್ಞೆಯಿಲ್ಲದೆ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಧೃಢಪಡಿಸಿದಾಗ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net