

ಶಹಾಬಾದ್: ವಾಡಿಯಿಂದ ಶಹಾಬಾದ್ಗೆ ಮಹಿಳೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ಗುಂಪೊಂದು ಥಳಿಸಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೈತಿಕ ಸಂಬಂಧ ಶಂಕೆಯೊಂದಿಗೆ ಕೊಲೆ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ವಾಡಿಯ ಪೀಲಕಮ್ಮ ಬಡಾವಣೆ ನಿವಾಸಿ ಜಗದೀಶ ಮಲ್ಲಿಕಾರ್ಜುನ (32) ತನ್ನ ಬಡಾವಣೆಯಲ್ಲಿರುವ ಆಶಾ ಬೇಗಂ (39) ಜತೆ ಬೈಕ್ನಲ್ಲಿ ಶಹಾಬಾದ್ಗೆ ಬಂದಿದ್ದ. ಇದನ್ನು ಗಮನಿಸುತ್ತಲೇ ಮಹಿಳೆ ಸಮುದಾಯದ ಗುಂಪೊಂದು ಅಶೋಕ ನಗರ ಜಂಪ್ ಬಳಿ ಜಗದೀಶನನ್ನು ತಡೆದು ಸಮೀಪದ ಕೋಣೆಯೊಂದರಲ್ಲಿ ಎಳೆದೊಯ್ದು ಮನಬಂದಂತೆ ಥಳಿಸಿದೆ.
ತೀವ್ರ ಪೆಟ್ಟು ತಿಂದರೂ ಥಳಿಸಿದ ಗುಂಪಿನ ನಿರ್ದೇಶನದಂತೆ ವಾಡಿಯಲ್ಲಿರುವ ತನ್ನ ಗೆಳೆಯರಿಗೆ ಮೊಬೈಲ್ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಿತ್ರರು ವಾಹನದಲ್ಲಿ ಶಹಾಬಾದ್ಗೆ ಆಗಮಿಸಿ ಆತನನ್ನು ವಾಡಿಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಮೃತ ಜಗದೀಶನ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಹೆಂಡತಿ ಗಂಡನನ್ನು ಬಿಟ್ಟು ತವರಿಗೆ ಹೋಗಿದ್ದಾಳೆ ಎನ್ನಲಾಗಿದೆ. ಆತನೊಂದಿಗೆ ಬೈಕ್ನಲ್ಲಿ ಹೋದ ಮಹಿಳೆಗೂ ಮದುವೆಯಾಗಿದ್ದು, 20 ವರ್ಷದ ಮಗನಿದ್ದಾನೆ. ಪ್ರಕರಣದ ಬಗ್ಗೆ ತಿಳಿಯುತ್ತಲೇ ಶಹಾಬಾದ್ಗೆ ಹೆಚ್ಚುವರಿ ಎಸ್ಪಿ, ವಾಡಿಗೆ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದು, ಶಹಾಬಾದ್ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.