

ಅಜ್ಜಂಪುರ: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸೋಮವಾರ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಇಬ್ಬರು ತೀವ್ರ ಗಾಯಗೊಂಡಿದ್ದು, ಬೆಂಕಿ ನಂದಿಸಲು ಬಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಂಭೀರ ಗಾಯಗೊಂಡಿರುವ ಮನೆಯ ಮಾಲೀಕ ಕುಮಾರಪ್ಪ ಮತ್ತು ಇವರ ಅಣ್ಣನ ಮಗ ಕಾರ್ತಿಕ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಾಣಿ ಅಂಗಡಿಗೆ ಬಂದಿದ್ದ ಗಿರೀಶ್ ಮತ್ತು ಶಾಂತವೀರಪ್ಪ ಮತ್ತಿತರರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮಾರಪ್ಪ ಅವರು ಕಿರಾಣಿ ಅಂಗಡಿ ನಡೆಸುತ್ತಾರೆ. ಮನೆಯಲ್ಲಿದ್ದವರಿಗೆ ಕಾಫಿ ಮಾಡಲು ಹೋದಾಗ ಗ್ಯಾಸ್ ಸಿಲಿಂಡರ್ ಹೊತ್ತಿ ಉರಿದು ಸ್ಫೋಟಗೊಂಡಿದೆ. ರಭಸಕ್ಕೆ ಮನೆಯಲ್ಲಿದ್ದ ಕುಮಾರಪ್ಪ ಮತ್ತು ಕಾರ್ತಿಕ್‌ಗೆ ಬಹಳಷ್ಟು ಸುಟ್ಟಗಾಯಗಳಾಗಿವೆ. ಬೆಂಕಿ ನಂದಿಸಲು ಮುಂದಾದವರಿಗೂ ಸುಟ್ಟ ಗಾಯಗಳಾಗಿವೆ. ಮನೆ ಹಾಗೂ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.