ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ ಸಿಡಿಲಿಗೆ ಇಬ್ಬರು ಬಲಿ

Rain
Published on

ಬೆಂಗಳೂರು: ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಭೂಮಿಗೆ ಕೊನೆಗೂ ಮಳೆರಾಯ ತಂಪೆರೆ ದಿದ್ದಾನೆ. ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳ ಗರಿಷ್ಠ ಉಷ್ಣಾಂಶ 40 ಡಿಗ್ರಿ ದಾಟಿದ್ದರಿಂದ ಜನರು ಸಂಕಷ್ಟಕ್ಕೀಡಾಗಿದ್ದರು. ತಾಪಮಾನ ದಿನೇ ದಿನೆ ಏರಿಕೆ ಆಗುತ್ತಿರುವ ನಡುವೆಯೇ ಇಂದು ವಿಜಯಪುರದ ಇಂಡಿ ತಾಲೂಕು, ಸಿಂದಗಿ, ರಾಯಚೂರಿನ ಮಸ್ಕಿ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ. ಇಂಡಿ ತಾಲೂಕಿನಲ್ಲೇ ಇಬ್ಬರು ಪ್ರತ್ಯೇಕ ಅವಘಡಗಳಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ. ಇತ್ತ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಯಾಗಿದೆ. ಶಿವಮೊಗ್ಗ ನಗರ, ಶಿಕಾರಿಪು, ಸಾಗರ, ಚಿಕ್ಕಮಗಳೂರಿನ ಬಾಳೆಹೊನ್ನೂರು, ಕಳಸ, ಎನ್​ಆರ್​ಪುರದಲ್ಲೂ ಧಾರಕಾರ ಮಳೆಯಾಗಿ ದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದಲ್ಲಿ ಶುಕ್ರವಾರದಿಂದ 5ದಿನ ಉಡುಪಿ, ದ.ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಐದು ದಿನ ಮಳೆಯಾಗುವುದಾಗಿ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಕೆಲ ಜಿಲ್ಲೆಗಳಲ್ಲಿ ವರುಣನ ಆರ್ಭಟ ಶುರುವಾಗಿದ್ದು, ಕಾದ ಕಾವಲಿಯಂತಾಗಿದ್ದ ರಾಜ್ಯಕ್ಕೆ ಮಳೆಯ ಸಿಂಚನ ನೆಮ್ಮದಿ ಮೂಡಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಮಳೆ-ಗಾಳಿ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕೃಷಿಕ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (43) ಹಾಗೂ ಇಂಡಿ ಪಟ್ಟಣದ ಬೀರಪ್ಪ ನಿಂಗಪ್ಪ ಅವರಾದಿ (15) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಭೀಕರ ಬರದ ಬೆನ್ನಲ್ಲೇ ಬೇಸಿಗೆ ಆರಂಭಕ್ಕೂ ಮುನ್ನವೇ ತೀವ್ರಗೊಂಡಿದ್ದ ರಣ ಬಿಸಿಲಿನಿಂದ ರಾಜ್ಯ ಕಂಗೆಟ್ಟಿದ್ದು, ಇದೀಗ ಮಳೆ ಒಂದಿಷ್ಟು ಸಮಾಧಾನ ತಂದಿದೆ.

ಮಳೆ ಆರ್ಭಟ: ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಅರ್ಧಗಂಟೆ ಕಾಲ ಬಿರುಸು ಮಳೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕಾಟಗಲ್, ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಮತ್ತು ಗುರುಗುಂಟಾದಲ್ಲಿ ಗುಡುಗು ಮತ್ತು ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಅಲ್ಲಲ್ಲಿ ಮೋಡ ಕವಿದಿದ್ದು, ಸಣ್ಣ ಮಳೆಯಾಗಿದೆ.

Rain

ಶಿವಮೊಗ್ಗ ಜಿಲ್ಲೆಯಲ್ಲಿ ಎರಡ್ಮೂರು ದಿನಗಳಿಂದ ಹಲವೆಡೆ ಸುರಿದಿದ್ದ ಮಳೆ ಸಂಜೆ ವೇಳೆ ಶಿವಮೊಗ್ಗ ನಗರಕ್ಕೂ ಕಾಲಿಟ್ಟಿತು. ಶಿವಮೊಗ್ಗ ನಗರ ಸೇರಿ ಜಿಲ್ಲಾದ್ಯಂತ ಬಿಸಿಲ ತಾಪ 40 ಡಿಗ್ರಿವರೆಗೆ ತಲುಪಿತ್ತು. ಬಿಸಿಲಿಗೆ ಜನರು ಹೈರಾಣಾಗಿದ್ದರು. ಇದೀಗ ಶಿವಮೊಗ್ಗ, ಶಿಕಾರಿಪುರ, ಸಾಗರ ಸೇರಿ ಹಲವೆಡೆ ವರುಣ ಕೃಪೆ ತೋರಿದ್ದು, ಜನರು ನಿಟ್ಟುಸಿರು ಬಿಡುವಂತಾಯಿತು. ಶಿವಮೊಗ್ಗ ತಾಲೂಕಿನ ಚೋರಡಿ, ಕುಂಸಿ, ಶಿಕಾರಿಪುರ ತಾಲೂಕಿನ ಹಲವೆಡೆ ಉತ್ತಮ ಮಳೆ ಆಯಿತು. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕೆಲವೆಡೆ ಗುರುವಾರ ಧಾರಾಕಾರ ಮಳೆಯಾಗಿದ್ದರೆ, ಹಲವೆಡೆ ಚದುರಿದಂತೆ ಆಗಿದೆ. ಬಾಳೆಹೊನ್ನೂರು ಹಾಗೂ ಕಳಸ ಭಾಗದಲ್ಲಿ ಭಾರಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ.

ಶೇ.53 ಮಳೆ ಕುಂಠಿತ: ಜ.1ರಿಂದ ಏ.8ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 20 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 10 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡು ಶೇ.77, ಉತ್ತರ ಒಳನಾಡು ಶೇ.85, ಮಲೆನಾಡು ಶೇ.10 ಮಳೆ ಅಭಾವ ಉಂಟಾದರೆ, ಕರಾವಳಿಯಲ್ಲಿ ವಾಡಿಕೆಗಿಂತ ಶೇ.83 ಅಧಿಕ ಮಳೆ ಸುರಿದಿದೆ.

ರಾಜ್ಯದಲ್ಲಿ 5 ದಿನ ವರ್ಷಧಾರೆ: ರಾಜ್ಯದಲ್ಲಿ ಶುಕ್ರವಾರದಿಂದ ಐದು ದಿನ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಏ.12ರಿಂದ ಏ.18ರವರೆಗೆ ಗುಡುಗು ಮಿಂಚುಸಹಿತ ಮಳೆ ಬೀಳಲಿದೆ. ಯಾದಗಿರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಬಾಗಲಕೋಟೆ, ಗದಗ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರಿನಲ್ಲಿ ಮುಂದಿನ ಮೂರು ದಿನ ಹಾಗೂ ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಏ.13, ಏ .14ರಂದು ಸಾಧಾರಣ ಮಳೆ ಸುರಿಯಲಿದೆ. ಯುಗಾದಿ ಬಳಿಕ ರಾಜ್ಯದ ಕೆಲವೆಡೆ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಏರಿಕೆಯಾಗಿದ್ದ ಉಷ್ಣಾಂಶ ಎರಡು ದಿನಗಳಿಂದ ಇಳಿಮುಖವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net