

ಕಲಬುರಗಿ: ಮೊನ್ನೆಯಷ್ಟೇ ತಾಯಿಯೊಬ್ಬರು ಮಕ್ಕಳಿಬ್ಬರ ಸಹಿತ ಭೀಮಾ ನದಿ ಪಾಲಾಗಿದ್ದರು. ತಮ್ಮನನ್ನು ರಕ್ಷಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ತಾಯಿ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಭೀಮಾ ನದಿಗೆ ಇನ್ನಿಬ್ಬರು ಬಲಿಯಾಗಿದ್ದಾರೆ.
ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಿ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಕೋನಹಿಪ್ಪರಗಿ ಗ್ರಾಮದ ರಾಮು ದೊಡ್ಡಮನಿ (12), ದೇವು ಹೊಸಮನಿ (17) ಸಾವಿಗೀಡಾದ ಬಾಲಕರು. ಕೋನಹಿಪ್ಪರಗಿ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಸಮೀಪ ಈ ದುರಂತ ಸಂಭವಿಸಿದೆ.
ನೀರು ಕುಡಿಯಲೆಂದು ರಾಮು ನದಿಗೆ ಇಳಿದಿದ್ದು, ಆಗ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದು ಮುಳುಗಲಾರಂಭಿಸಿದ್ದ. ಆತನನ್ನು ರಕ್ಷಿಸಲು ಹೋದ ದೇವು ಕೂಡ ನೀರಿನಲ್ಲಿ ಮುಳುಗಿದ್ದಾನೆ. ಇಬ್ಬರ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.