

ಮಂಗಳೂರು: ಅಂತಾರಾಷ್ಟ್ರೀಯ ಸ್ನೇಹಿತರ ದಿನವಾದ ಇಂದೇ ಇಬ್ಬರು ಗೆಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಒಬ್ಬನ ಜೀವ ಉಳಿಸಲೆಂದು ಇನ್ನೊಬ್ಬ ಧಾವಿಸಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾಗುವಂತಾಗಿದೆ.
ದಕ್ಷಿಣಕ್ನನಡ ಜಿಲ್ಲೆಯ ಮಂಗಳೂರು ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಸಾವಿಗೀಡಾದ ಯುವಕರು. ಇವರಿಬ್ಬರು ಕ್ರಿಕೆಟ್ ಆಡಲೆಂದು ಹೋಗಿದ್ದಾಗ ಈ ಪ್ರಕರಣ ನಡೆದಿದೆ.
ಯುವಕರ ತಂಡ ಕ್ರಿಕೆಟ್ ಆಡಲು ತೆರಳಿದ್ದು, ಆ ಬಳಿಕ ಇವರಿಬ್ಬರು ಹಳ್ಳದ ದಂಡೆಯಲ್ಲಿ ಕುಳಿತಿದ್ದರು. ಹಳ್ಳದ ನೀರಿಗೆ ಇಳಿದಿದ್ದ ವರುಣ್, ಆಯತಪ್ಪಿ ಹಳ್ಳಕ್ಕೇ ಬಿದ್ದಿದ್ದ. ಇದನ್ನು ನೋಡಿದ ವೀಕ್ಷಿತ್ ರಕ್ಷಣೆಗೆ ಧಾವಿಸಿದ್ದಾನೆ. ಆದರೆ ಹಳ್ಳದಲ್ಲಿ ಹೂಳು ತುಂಬಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವಿಗೀಡಾದರು. ಘಟನೆಯ ಮಾಹಿತಿ ಪಡೆದು ಹಳ್ಳದಲ್ಲಿ ಹುಡುಕಾಟ ನಡೆಸಿದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಕೊನೆಗೂ ಇಬ್ಬರ ಶವವನ್ನು ಹಳ್ಳದಿಂದ ಹೊರಕ್ಕೆ ತೆಗೆದಿದ್ದಾರೆ.