

ರಾಯಚೂರು: ಚರಂಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಯಲ್ಲಿ ಬಿದ್ದು ಒಂದೇ ಮನೆಯ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬ್ಯಾಗವಾಟ್ ಗ್ರಾಮದ ಅಜಯ್ (8) ಹಾಗೂ ಸುರೇಶ (6) ಸಾವಿಗೀಡಾದ ಬಾಲಕರು. ಇವರಿಬ್ಬರೂ ಒಂದೇ ಮನೆಯ ಅಂದರೆ ಅಣ್ಣ-ತಮ್ಮಂದಿರ ಮಕ್ಕಳು. ಸಂಜೆ ಆಟವಾಡಲು ಹೊರಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚರಂಡಿ ಕಾಮಗಾರಿಗಾಗಿ ಈ ಗುಂಡಿ ತೋಡಲಾಗಿದ್ದು, ಅದಾಗಿ ಎರಡು-ಮೂರು ತಿಂಗಳು ಕಳೆದರೂ ಗುಂಡಿಯನ್ನು ಮುಚ್ಚಿಸಿರಲಿಲ್ಲ. ಗುಂಡಿ ಮುಚ್ಚದ ಕಾರಣ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಶಾಲೆಯ ಪಕ್ಕದಲ್ಲೇ ಈ ಗುಂಡಿ ಇದ್ದು, ಆಟವಾಡಲು ಹೋಗಿದ್ದ ಈ ಬಾಲಕರಿಬ್ಬರೂ ಗುಂಡಿಯನ್ನು ಗಮನಿಸದೇ ಕಾಲು ಜಾರಿ ಒಳಕ್ಕೆ ಬಿದ್ದಿದ್ದರು. ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.