ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ 'ಶವ'!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

Woman
Published on

ಉತ್ತರಪ್ರದೇಶ: ಎಷ್ಟೋ ಸಲ ದೇಹ ನಿಶ್ಚಲಗೊಂಡರೂ ಸಾವು ಸಂಭವಿಸಿದೆಯೋ ಇಲ್ಲವೋ ಎಂಬ ಗೊಂದಲ ವೈದ್ಯರು ದೃಢೀಕರಿಸುವವರೆಗೂ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ಸಾವು ಸಂಭವಿಸಿದೆ ಎಂದು ವೈದ್ಯರು ದೃಢೀಕರಿಸಿದ್ದರೂ ಮೃತಪಟ್ಟಿದ್ದಾಳೆ ಎನ್ನಲಾದ ಮಹಿಳೆ ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ಪ್ರಸಂಗವೊಂದು ನಡೆದಿದೆ.

ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ಈ ಅತ್ಯಪರೂಪದ ಪ್ರಸಂಗ ನಡೆದಿದೆ. ಇಲ್ಲಿನ 81 ವರ್ಷದ ಮಹಿಳೆ ಹರಿಭೇಜಿ ಎಂಬಾಕೆ ಬ್ರೇನ್ ಹೆಮರೇಜ್​ಗೆ ಒಳಗಾಗಿದ್ದು, ಆಕೆಯನ್ನು ಡಿ. 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಆಕೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಆಕೆ ಬ್ರೇನ್​ ಡೆತ್​ಗೆ ಒಳಗಾಗಿದ್ದಾಳೆ ಎಂದು ವೈದ್ಯರು ಅವಳ ಸಾವನ್ನು ದೃಢೀಕರಿಸಿದ್ದರು.

ವೈದ್ಯರ ದೃಢೀಕರಣದ ಬಳಿಕ ಕುಟುಂಬಸ್ಥರು ಆಕೆಯ ಶವವನ್ನು ಮನೆಗೆ ತಂದಿದ್ದು, ಬಳಿಕ ಅಂತಿಮಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಶವವಾಗಿದ್ದ ಆಕೆ ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದಿದ್ದರಿಂದ ಕುಟುಂಬಸ್ಥರು ಹಾಗೂ ಇತರರು ದಿಗ್ಭ್ರಾಂತರಾಗಿದ್ದರು.

ಹೀಗೆ ಸ್ಮಶಾನದ ಹಾದಿಯಲ್ಲಿ ಕಣ್ಣು ಬಿಟ್ಟ ಮಹಿಳೆಯನ್ನು ಬಳಿಕ ವಾಪಸ್ ಮನೆಗೆ ಕರೆದೊಯ್ಯಲಾಗಿತ್ತು. ದುರದೃಷ್ಟವಶಾತ್​ ಅದರ ಮರುದಿನವೇ ಅಂದರೆ ಇಂದು ಆಕೆ ಸಾವಿಗೀಡಾದಳು. ಆಕೆಯ ಪುತ್ರ ಸುಗ್ರೀವ್ ಸಿಂಗ್ ಇಂದು ಅಂತಿಮಸಂಸ್ಕಾರ ನೆರವೇರಿಸಿದ್ದು, ತಾಯಿ ಜೀವಂತ ಇರುವಾಗಲೇ ಸತ್ತಿದ್ದಾರೆ ಎಂದು ದೃಢೀಕರಿಸಿದ್ದ ವೈದ್ಯರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net