

ಕೋಲ್ಕತ್ತ: ಮಳೆಯಿಂದಾಗಿ ನೀರು ನಿಂತಿದ್ದ ಜಾಗದಲ್ಲಿ ಮೀನು ಹಿಡಿಯುತ್ತಿದ್ದ ಇಬ್ಬರು ಬಾಲಕರ ತಲೆಯನ್ನೇ ಕತ್ತರಿಸಿ ಕೊಲೆ ಮಾಡಲಾಗಿದೆ.
ಮುರ್ಷಿದಾಬಾದ್ ಜಿಲ್ಲೆಯ ಬೆಹ್ರಾಮ್ಪುರದ ಕಂತಾಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮೀನು ಹಿಡಿಯಲು ತೆರಳಿದ್ದ ಬಾಲಕರು ಎರಡು ದಿನಗಳಿಂದ ಕಾಣೆಯಾಗಿದ್ದ ಬಾಲಕರ ಶವಗಳು ಭಾನುವಾರ ಪತ್ತೆಯಾಗಿವೆ. ಬಾಲಕರನ್ನು 15 ವರ್ಷದ ಮಂಜರುಲ್ ಶೇಖ್ ಹಾಗೂ 16 ವರ್ಷದ ತಂಜರುಲ್ ಶೇಖ್ ಎಂದು ಗುರುತಿಸಲಾಗಿದೆ.
ಸ್ಥಳೀಯ ಯುವಕರಿಂದಲೇ ಕೃತ್ಯ: ಈ ಇಬ್ಬರು ಬಾಲಕರು ಸಂಭಂಧಿಗಳಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳೀಯ ಯುವಕರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರವಾಹದಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಹೀಗಾಗಿ ಮೀನು ಹಿಡಿಯಲೆಂದು ಇಬ್ಬರು ದೋಣಿಯಲ್ಲಿ ಹಿಜಲೇರ್ ಮಾಥ್ ಎಂಬ ಪ್ರದೇಶಕ್ಕೆ ತೆರಳಿದ್ದರು. ಆಗಿನಿಂದಲೇ ಇಬ್ಬರು ನಾಪತ್ತೆಯಾಗಿದ್ದರು.
ಭಾನುವಾರ ಬೆಳಗ್ಗೆ ಪೊದೆಯೊಂದರಲ್ಲಿ ಇಬ್ಬರ ರುಂಡವಿಲ್ಲದ ಶವಗಳು ಪತ್ತೆಯಾಗಿವೆ. ಅಲ್ಲಿಂದ ಅಂದಾಜು 40 ಮೀಟರ್ ದೂರದಲ್ಲಿ ಇಬ್ಬರ ತಲೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಎಂಟು ಜನರ ವಿಚಾರಣೆ ನಡೆಸಿದ್ದಾರೆ ಮೀನು ಹಿಡಿಯುವ ವಿಚಾರವಾಗಿಯೇ ಅವರ ಕೊಲೆ ನಡೆದಿದೆ ಎಂದು ಹೇಳಲಾಗಿದೆ.