ಬ್ಲೂ ಟಿಕ್ ಬೇಕಾ? ಪ್ರತಿ ತಿಂಗಳು 8 ಡಾಲರ್ ಪಾವತಿಸಿ! ಇಂದಿನಿಂದಲೇ ಟ್ವಿಟರ್​ನಿಂದ ಹೊಸ ರೂಲ್ಸ್​ ಜಾರಿ

Twitter
Published on

ನವದೆಹಲಿ: ಪ್ರತಿ ತಿಂಗಳು 8 ಡಾಲರ್​ ನೀಡಿ ಬ್ಲೂ ಟಿಕ್​ ಪಡೆಯುವ ವೆರಿಫಿಕೇಶನ್​ ಸೇವೆಯನ್ನು ಇಂದಿನಿಂದ ಟ್ವಿಟರ್​ ಆರಂಭಿಸಿದೆ. ವಿಶ್ವದ ನಂಬರ್​ 1 ಶ್ರೀಮಂತ ಎಲಾನ್​ ಮಸ್ಕ್​, ಟ್ವಿಟರ್​ ಖರೀದಿ ಬೆನ್ನಲ್ಲೇ ಬ್ಲೂಟಿಕ್​ ಪಡೆಯಲು ಇನ್ಮುಂದೆ ಹಣ ಪಾವತಿಸಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಇಂದಿನಿಂದ ಅದು ಜಾರಿಯಾಗಿದ್ದು, ಸದ್ಯಕ್ಕೆ ಕೆಲವು ವಲಯಗಳಲ್ಲಿ ಐಫೋನ್​ಗಳಲ್ಲಿ ಮಾತ್ರ ಇದು ಲಭ್ಯವಾಗಲಿದೆ.

ಯುನೈಟೆಡ್​ ಕಿಂಗ್​ಡಮ್​, ಯುನೈಟೆಡ್​ ಸ್ಟೇಟ್ಸ್​, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗಳಲ್ಲಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಐಒಎಸ್​ ಆಪರೇಟಿಂಗ್​ ಸಿಸ್ಟಮ್​ಗಳಲ್ಲಿ ಮಾತ್ರ ಸದ್ಯಕ್ಕೆ ಕಾರ್ಯ ನಿರ್ವಹಿಸಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್​, ಇಂದಿನಿಂದ ನಾವು ಟ್ವಿಟರ್​ ಬ್ಲೂಗೆ ಉತ್ತಮವಾದ ಹೊಸ ಫೀಚರ್​ಗಳನ್ನು ಸೇರಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಫೀಚರ್​ಗಳನ್ನು ಪಡೆಯಲಿದ್ದೇವೆ. ಸದ್ಯಕ್ಕೆ ನೀವು ಈಗ ಸೈನ್ ಅಪ್ ಮಾಡಿದರೆ ಪ್ರತಿ ತಿಂಗಳಿಗೆ 7.99 ಡಾಲರ್​ ನೀಡಿ ಟ್ವಿಟರ್​ ಬ್ಲೂ ಪಡೆಯಬೇಕಾಗುತ್ತದೆ ಎಂದು ಹೇಳಿದೆ.

ಬ್ಲೂ ಟಿಕ್​ ಎಂಬುದು ಜನರಿಗೆ ಶಕ್ತಿ ಇದ್ದಂತೆ. ನೀವು ಈಗಾಗಲೇ ನೋಡಿರುವಂತೆ ಸೆಲೆಬ್ರಿಟಿಗಳು, ಕಂಪನಿಗಳು ಮತ್ತು ರಾಜಕಾರಣಿಗಳಂತೆ ನೀವು ಸಹ ನಿಮ್ಮ ಖಾತೆಗೆ ಬ್ಲೂಟಿಕ್​ ಅನ್ನು ಪಡೆಯಬಹುದು ಎಂದು ಟ್ವಿಟರ್ ಹೇಳಿದೆ.

ವೆರಿಫಿಕೇಶ್​ ಸೇವೆ ಪೂರ್ಣಗೊಳಿಸಿದ ಖಾತೆಗಳಿಗಾಗಿ ಶೀಘ್ರದಲ್ಲೇ ಹೊರತರಲಿರುವ ಕೆಲವು ಹೊಸ ಫೀಚರ್​ಗಳ ಸಾರಾಂಶವನ್ನು ಟ್ವಿಟರ್​ ನೀಡಿದೆ.

ಇದುವರೆಗೂ ಟ್ವಿಟರ್​ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್​ ಮಾಡಲು ಅವಕಾಶವಿತ್ತು. ಆದರೆ, ಬ್ಲೂಟಿಕ್​ ಸೇವೆ ಪಡೆದವರು ಟ್ವಿಟರ್​ಗೆ ಉದ್ದದ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಬಾಟ್‌ಗಳ ವಿರುದ್ಧದ ಟ್ವಿಟರ್​ ಯುದ್ಧದಲ್ಲಿ ನೀವು ಟ್ವಿಟರ್ ಅನ್ನು ಬೆಂಬಲಿಸುತ್ತಿರುವುದರಿಂದ, ಅರ್ಧದಷ್ಟು ಜಾಹೀರಾತುಗಳನ್ನು ಟ್ವಿಟರ್​ ಬಹುಮಾನವಾಗಿ ನೀಡಲಿದೆ ಎಂದು ಕಂಪನಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net