

ನವದೆಹಲಿ: ಕೇಂದ್ರ ಸರ್ಕಾರದೊಂದಿಗೆ ಕೆಲವು ದಿನಗಳಿಂದ ಹಗ್ಗಜಗ್ಗಾಟ ನಡೆಸುತ್ತಿರುವ ಟ್ವಿಟರ್ ಇದೀಗ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಅದೀಗ ಸಂಸ್ಥೆಯ ಪಾಲಿಗೆ ಭಾರಿ ಉರುಳಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾಗಳಿಗೆ ಸಂಬಂಧಿಸಿದಂತೆ ಭಾರತದ ಹೊಸ ಐಟಿ ಕಾಯ್ದೆಯ ನಿಯಮಗಳನ್ನು ಪಾಲಿಸಲು ಮೀನ-ಮೇಷ ಎಣಿಸುತ್ತಿರುವ ಟ್ವಿಟರ್ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಘರ್ಷ ಹೊಂದಿದೆ. ಇದರ ಜತೆಗೆ ಮೊನ್ನೆಮೊನ್ನೆಯಷ್ಟೇ ಕೇಂದ್ರ ಐಟಿ ಸಚಿವರ ಟ್ವಿಟರ್ ಖಾತೆ ಕೆಲವು ಗಂಟೆಗಳ ಮಟ್ಟಿಗೆ ಬ್ಲಾಕ್ ಮಾಡಿ ವಿವಾದಕ್ಕೀಡಾಗಿ ಮತ್ತೆ ಅನ್ಬ್ಲಾಕ್ ಮಾಡಿತ್ತು. ನಂತರ ಇತ್ತೀಚೆಗಷ್ಟೇ ನೇಮಿಸಲಾಗಿದ್ದ ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ ನಿನ್ನೆಯಷ್ಟೇ ರಾಜೀನಾಮೆ ನೀಡಿದ್ದರು. ಇದರಿಂದ ಟ್ವಿಟರ್ ಐಟಿ ಕಾಯ್ದೆ ಪಾಲನೆಯಿಂದ ಹೊರಬಂದಂತಾಗಿದ್ದು, ಈಗ ಈ ಹಿಂದೆ ಮಾಡಿದ್ದಂಥದ್ದೇ ಎಡವಟ್ಟನ್ನು ಮತ್ತೆ ಮಾಡಿದೆ.
ಅದೇನೆಂದರೆ ಭಾರತದ ನಕಾಶೆಯನ್ನು ಟ್ವಿಟರ್ ಮತ್ತೊಮ್ಮೆ ಕೆಡಿಸಿದೆ. ಅಂದರೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿ ತಪ್ಪು ನಕಾಶೆಯನ್ನು ಪ್ರಕಟಿಸಿದೆ. ಟ್ವಿಟರ್ ವೆಬ್ಸೈಟ್ನ ಕರಿಯರ್ ಸೆಕ್ಷನ್ನಲ್ಲಿನ 'ಟ್ವೀಪ್ ಲೈಫ್' ವಿಭಾಗದಲ್ಲಿ ಪ್ರಕಟಿಸಲಾಗಿರುವ ವಿಶ್ವದ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಲಾಗಿದೆ. ಈ ಹಿಂದೆಯೂ ಲಡಾಖ್ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿದ್ದ ಟ್ವಿಟರ್, ಕೊನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಿಗೆ ತಪ್ಪನ್ನು ತಿದ್ದಿಕೊಂಡಿತ್ತು. ಈಗ ಮತ್ತೆ ಅಂಥದ್ದೆ ತಪ್ಪು ಮರುಕಳಿಸಿದೆ. ಜತೆಗೆ ಕೇಂದ್ರ ಸರ್ಕಾರದೊಂದಿಗೆ ಟ್ವಿಟರ್ ಸಂಘರ್ಷ ಇರುವುದರಿಂದ ಈ ಪ್ರಕರಣ ಗಂಭೀರವಾಗಿ ಪರಿಣಮಿಸಿದರೂ ಅಚ್ಚರಿ ಏನಲ್ಲ. (ಏಜೆನ್ಸೀಸ್)