

ನವದೆಹಲಿ: ಯುವತಿಯೊಬ್ಬಳ (20) ಮೇಲೆ ಆಸಿಡ್ ದಾಳಿ (Acid Attack) ಪ್ರಕರಣವೊಂದು ತಿರುವು ಪಡೆದೆಕೊಂಡಿದ್ದು, ಪ್ರಮುಖ ಆರೋಪಿಯ ಪತ್ನಿ, ಸಂತ್ರಸ್ತೆಯ ತಂದೆಯ ವಿರುದ್ಧ ಲೈಂಗಿಕ ಶೋಷಣೆ ಹಾಗೂ ಬ್ಲಾಕ್ಮೇಲ್ ಆರೋಪ ಹೊರಿಸಿ ದೂರು ದಾಖಲಿಸಿರುವ ಘಟನೆ ದೆಹಲಿಯಲ್ಲಿ ಸೋಮವಾರ (ಅ.27) ನಡೆದಿದೆ.
ಭಾನುವಾರ (ಅ.26) ಸಂಜೆ ವಾಯುವ್ಯ ದೆಹಲಿಯ ಅಶೋಕ್ ವಿಹಾರ್‌ನ ಲಕ್ಷ್ಮಿಬಾಯಿ ಕಾಲೇಜು ಬಳಿ ಮೂವರು ಪುರುಷರು ಆ ವಿದ್ಯಾರ್ಥಿನಿಯನ್ನು ತಡೆದು, ಆಕೆಯೊಂದಿಗೆ ವಾಗ್ವಾದ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಆಕೆಯ ಮೇಲೆ ಆಸಿಡ್ ಎರಚಲು ಮುಂದಾಗಿದ್ದು, ಆಕೆ ಮುಖವನ್ನು ರಕ್ಷಿಸಿಕೊಳ್ಳಲು ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯ ಎರಡೂ ಕೈಗಳು ಸುಟ್ಟು ಹೋಗಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿನಿಯನ್ನು 3 ಆರೋಪಿಗಳು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದರು. ಈ ವೇಳೆ ಇವರ ಮಧ್ಯೆ ವಾಗ್ವಾದ ನಡೆದಿದ್ದು, ವಿದ್ಯಾರ್ಥಿಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ. ನಂತರ, ಮಹಿಳೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಭೀಷಮ್ ಸಿಂಗ್ ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.
ನನ್ನ ಸಹೋದರಿಗೆ ದೇಹದ ಹಲವು ಕಡೆಯಲ್ಲಿ ಸುಟ್ಟ ಗಾಯಗಳಾಗಿವೆ. ನನಗೆ ದಾಳಿಕೋರರಲ್ಲಿ ಒಬ್ಬನ ಪರಿಚಯವಿದೆ. ಅವನು ನಮ್ಮ ಮನೆಯ ಸಮೀಪದಲ್ಲಿಯೇ ಇದ್ದಾನೆ. ಅವನು ನನ್ನ ಸಹೋದರಿಯನ್ನು ಹಿಂಬಾಲಿಸುತ್ತಿದ್ದನು ಮತ್ತು ಅವಳು ಕಳೆದ ತಿಂಗಳು ಅವನೊಂದಿಗೆ ಜಗಳ ಮಾಡಿದ್ದಳು. ನಮಗೆ ನ್ಯಾಯ ಬೇಕು, ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಈ ಪ್ರಕರಣ ಟ್ವಿಸ್ಟ್ ಪಡೆದಿದ್ದು, ಆರೋಪಿಯ ಪತ್ನಿ ಆಸಿಡ್ ದಾಳಿಯ ಸಂತ್ರಸ್ತೆಯ ತಂದೆಯ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೆಲವು ಸಮಯದ ಹಿಂದೆ ನಾನು ಸಂತ್ರಸ್ತೆಯ ತಂದೆಯ ಬಳಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಅವರು ತನ್ನನ್ನು ಬಲವಂತವಾಗಿ ಸಂಬಂಧಕ್ಕೆ ಸೇರಿಸಿಕೊಂಡರು. ನಂತರ ಖಾಸಗಿ ವಿಡಿಯೋಗಳನ್ನು ಬಳಸಿ ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ.
ಆಸಿಡ್ ದಾಳಿ ಹಾಗೂ ಆರೋಪಿಯ ಪತ್ನಿಯ ಲೈಂಗಿಕ ದೌರ್ಜನ್ಯದ ಆರೋಪಗಳೆರಡರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು ಆಸಿಡ್ ದಾಳಿಯನ್ನು ಗಮನಿಸಿದ್ದು, ಆರೋಪಿಯ ಬಂಧನ, ಸೂಕ್ತ ವೈದ್ಯಕೀಯ ಆರೈಕೆ ಮತ್ತು ಸಂತ್ರಸ್ತೆಗೆ ಪರಿಹಾರವನ್ನು ಕೋರಿ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇನ್ನು ಆಸಿಡ್ ದಾಳಿಗಳು ಮಹಿಳೆಯರ ವಿರುದ್ಧದ ಅತ್ಯಂತ ಕ್ರೂರ ಅಪರಾಧಗಳಲ್ಲಿ ಒಂದಾಗಿದೆ ಮತ್ತು ಅವುಗಳನ್ನು ಶೂನ್ಯ ಸಹಿಷ್ಣುತೆ ಮತ್ತು ಅನುಕರಣೀಯ ಶಿಕ್ಷೆಯೊಂದಿಗೆ ನಿಭಾಯಿಸಬೇಕು ಎಂದು ಆಯೋಗ ಪುನರುಚ್ಚರಿಸುತ್ತದೆ ಎಂದು ಸಮಿತಿ ಹೇಳಿದೆ. (ಏಜೆನ್ಸೀಸ್)