ದೇಶದ ಚಿತ್ರಣವನ್ನು ಕೆಟ್ಟದಾಗಿ ತೋರಿಸಲಾಗಿದೆ.. ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂ ಗರಂ! | Dogs

Bbau (75)
Published on

ನವದೆಹಲಿ: ಬೀದಿನಾಯಿಗಳ( Dogs) ವಿಚಾರದಲ್ಲಿ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಜಾರಿಗೆ ತರಲು ತೆಗೆದುಕೊಂಡ ಕ್ರಮಗಳ ಕುರಿತು ಅನುಸರಣಾ ಅಫಿಡವಿಟ್‌ಗಳನ್ನು ಸಲ್ಲಿಸಲು ವಿಫಲವಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ಗರಂ ಆಗಿದೆ.

ಅಲ್ಲದೆ, ಅನುಸರಣಾ ವರದಿಗಳನ್ನು ಸಲ್ಲಿಸಲು ವಿಫಲವಾದ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಹೊರತುಪಡಿಸಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಸಮನ್ಸ್ ಜಾರಿ ಮಾಡಿದೆ.

ನಾಯಿಗಳ ದಾಳಿಯ ಘಟನೆಗಳು ದೇಶವನ್ನು ಕೆಟ್ಟದಾಗಿ ಚಿತ್ರಿಸುತ್ತಿವೆ ಎಂದು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

''ಬೀದಿ ನಾಯಿಗಳ ವಿಚಾರದಲ್ಲಿ ನಿರಂತರ ಘಟನೆಗಳು ನಡೆಯುತ್ತಿವೆ ಮತ್ತು ದೇಶದ ಚಿತ್ರಣವನ್ನು ವಿದೇಶಿ ರಾಷ್ಟ್ರಗಳಿಗೆ ಕೆಟ್ಟದಾಗಿ ತೋರಿಸಲಾಗುತ್ತಿದೆ. ನಾವು ಸುದ್ದಿ ವರದಿಗಳನ್ನು ಸಹ ಓದುತ್ತಿದ್ದೇವೆ" ಎಂದು ಪೀಠ ಟೀಕಿಸಿದೆ.

ಏನಿದು ಎಬಿಸಿ ನಿಯಮ?

ಎಬಿಸಿ ನಿಯಮಗಳ ನಿಯಮ 11(9)ರ ಪ್ರಕಾರ, ರೇಬೀಸ್ ಸೋಂಕಿತ, ಸೋಂಕಿನ ಶಂಕಿತ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ತೋರಿಸುವ ನಾಯಿಗಳನ್ನು ಹೊರತುಪಡಿಸಿ, ಸಂತಾನಹರಣ, ಜಂತುಹುಳು ನಿವಾರಣ ಮತ್ತು ಲಸಿಕೆ ಹಾಕಿದ ನಂತರ ನಾಯಿಗಳನ್ನು ಮತ್ತೆ ಅದೇ ಪ್ರದೇಶಕ್ಕೆ ಬಿಡಬೇಕು.

ಆ.22ರಂದು ಪ್ರಕಟವಾಗಿರುವ ತೀರ್ಪಿನ ಪ್ರಕಾರ ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಲ್ಲಿ ಇಡುವಂತಿಲ್ಲ. ಅದರ ಬದಲಾಗಿ, ಬೀದಿ ನಾಯಿಗಳನ್ನು ಸೆರೆಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ಹಾಕಬೇಕು. ಬಳಿಕ ಆ ನಾಯಿಗಳನ್ನು ಎಲ್ಲಿ ಹಿಡಿಯಲಾಗಿತ್ತೋ ಅದೇ ಸ್ಥಳಕ್ಕೆ ಮತ್ತೆ ತೆಗೆದುಕೊಂಡು ಹೋಗಿ ಬಿಡಬೇಕು. ಆದರೆ, ರೇಬೀಸ್ ಸೋಂಕಿತ, ಹುಚ್ಚು ಅಥವಾ ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಅವುಗಳನ್ನು ಬಂಧನದಲ್ಲಿ ಇಡಬಹುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net