

ಹೈದರಾಬಾದ್: ಬಿಸಿಲಿನ ಝಳ ಏರುತ್ತಿದ್ದಂತೆ ಚುನಾವಣೆ ಕಾವು ಸಹ ಏರುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಪಕ್ಷಗಳ ಮುಂದಿರುವ ಸವಾಲು, ನಿಲುವುಗಳು ಏನು ಎಂಬಿತ್ಯಾದಿ ಚರ್ಚೆಗಳು ಜನ ಸೇರುವ ಸ್ಥಳಗಳಲ್ಲಿ ನಡೆಯುತ್ತಿರುತ್ತವೆ. ಇದಕ್ಕೆ ಮಾಧ್ಯಮಗಳೂ ಹೊರತಲ್ಲ.
ಪ್ರಮುಖವಾಗಿ ಸುದ್ದಿವಾಹಿನಿಗಳಲ್ಲಿ ನಡೆಯುವ ಕಾವೇರಿದ ಚರ್ಚೆಗಳು ಕಡೆಗೆ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತವೆ. ಅದೇ ರೀತಿ ಹೈದರಾಬಾದ್ ಮೂಲದ ತೆಲುಗು ವಾಹಿನಿಯೊಂದು ನಡೆಸಿದ ಡಿಬೆಟ್ನಲ್ಲಿ ಎರಡು ಪಕ್ಷಗಳ ಮುಖಂಡರು ಬಡಿದಾಡಿಕೊಂಡಿದ್ದಾರೆ. ಇದರ ಫೋಟೋ ಮತ್ತು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಲೈವ್ ಟಿವಿ ಚರ್ಚೆಯ ಸಮಯದಲ್ಲಿ ಜನಸೇನಾ ಬೆಂಬಲಿಗ ವಿಷ್ಣು ನಾಗಿರೆಡ್ಡಿ ಮತ್ತು ವೈಸಿಪಿ ವಿಶ್ಲೇಷಕ ಚಿಂತಾ ರಾಜಶೇಖರ್ ಅವರನ್ನು ಒಳಗೊಂಡ ಚರ್ಚೆಯು ವಿಕೋಪಕ್ಕೆ ತಿರುಗಿ ಕಡೆಗೆ ಘರ್ಷಣೆಗೆ ಕಾರಣವಾಗಿದೆ. ಮಾತಿನ ಚಕಮಕಿ ನಂತರ ಜನಸೇನಾ ಬೆಂಬಲಿಗ ಮತ್ತು ವೈಸಿಪಿ ವಿಶ್ಲೇಷಕ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಇದರ ವೀಡಿಯೋ ಮತ್ತೆ ಜನರ ನಡುವೆ ಚರ್ಚೆಗೆ ಕಾರಣವಾಗಿದೆ. ವಿಷ್ಣು ನಾಗಿರೆಡ್ಡಿ ಮತ್ತು ಚಿಂತಾ ರಾಜಶೇಖರ್ ಅವರನ್ನು ಒಳಗೊಂಡ ಹೊಡೆದಾಟ ಆಘಾತಕಾರಿ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ಘಟನೆ ಆನ್‌ಲೈನ್‌ನಲ್ಲಿ ವೇಗ ಪಡೆದುಕೊಂಡಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ, ಪಕ್ಷಗಳ ಮುಖಂಡರ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಆಂಕರ್ ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಆದರೆ ಅವರ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಕಡೆಗೆ ಮುಗಿಬಿದ್ದು ಹೊಡೆದಾಡಿಕೊಳ್ಳುವುದನ್ನು ಗಮನಿಸಬಹುದು.