

ಪ್ರಸಕ್ತ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿರುವ ರೈತರು ಅರಿಶಿಣ ಬೆಳೆ ಬೆಳೆದು ಅಧಿಕ ಆದಾಯ ಪಡೆಯಬಹುದೆಂಬ ಲೆಕ್ಕಾಚಾರದಲ್ಲಿ ಅರಿಶಿಣ ಬೀಜ ಖರೀದಿಗೆ ಮುಗಿಬೀಳುತ್ತಿದ್ದು, ಬಿತ್ತನೆ ಬೀಜಕ್ಕೆ ಭಾರಿ ಡಿಮಾಂಡ್ ಬಂದಿದೆ. ತಮಿಳುನಾಡಿನ ಸೇಲಂ, ಕಡಪಾ ಪಟ್ಟಣಗಳಿಂದ ಅರಿಶಿಣ ಬೀಜಗಳನ್ನು ಆಮದು ಮಾಡಿ ಕೊಳ್ಳಲಾಗುತ್ತಿದ್ದು, ಈ ಬಾರಿ ಅಲ್ಲಿಯೂ ಮಳೆ ಪ್ರಮಾಣ ಕಡಿಮೆಯಾದ ಕಾರಣಕ್ಕೆ ಬಿತ್ತನೆ ಬೀಜಗಳ ಇಳುವರಿ ತೀರಾ ಕಡಿಮೆಯಾಗಿದೆ. ಹಾಗಾಗಿ ಸೇಲಂನ ಕೆಲವು ರೈತರ ಬಳಿಯಷ್ಟೇ ಅರಿಶಿಣ ಬೀಜಗಳ ಸಂಗ್ರಹವಿದೆ. ಕಳೆದ ಬಾರಿ ಒಂದು ಕ್ವಿಂಟಾಲ್ ‘ಸೇಲಂ ಚೆನ್’ ಹೆಸರಿನ ತಳಿಯ ಅರಿಶಿಣ ಬೀಜಕ್ಕೆ -ಠಿ;4,000 ಬೆಲೆ ಇದ್ದದ್ದು, ಈ ಬಾರಿ 7,600 ರೂ.ಗೆ ಮಾರಾಟವಾಗುತ್ತಿದೆ. ದುಬಾರಿ ಬೆಲೆ ಕೊಟ್ಟರೂ ಬೀಜಗಳು ದೊರೆಯುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಧಾರಣಿ ತೇಜಿಯಾಗುತ್ತದೆ ಎನ್ನುತ್ತಾರೆ ಅರಿಶಿಣ ಬೆಳೆಗಾರ ಮಲ್ಲಪ್ಪ ಕೊಟಬಾಗಿ.
ಸೇಲಂನಿಂದ ಒಂದು ಲಾರಿಯಲ್ಲಿ 10 ರಿಂದ 16 ಟನ್ನಷ್ಟು ಬೀಜ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳಕ್ಕೆ ಬರುತ್ತದೆ. ಇಲ್ಲಿಗೆ ರಬಕವಿ-ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಭಾಗ, ಅಥಣಿ ತಾಲೂಕಿನ ವಿವಿಧ ಕಡೆಯ ರೈತರು ಖರೀದಿಗಾಗಿ ಬರುತ್ತಾರೆ. ರಬಕವಿ-ಬನಹಟ್ಟಿ ತಾಲೂಕಿನಿಂದಲೇ ಸುಮಾರು 100 ಕ್ವಿಂಟಾಲ್ ಬೀಜ ಖರೀದಿಯಾಗುತ್ತಿದೆ. ಜಗದಾಳ ಭಾಗದಲ್ಲಿ ಮಾರಾಟವಾಗುವ ಅರಿಶಿಣ ಬೀಜ ಉತ್ತಮ ಗುಣಮಟ್ಟದ್ದಾಗಿದೆ.
ಕಳೆದ 10 ವರ್ಷದಿಂದ ಇಲ್ಲಿಯೇ ಬೀಜ ಖರೀದಿ ಮಾಡುತ್ತಿದ್ದೇನೆ. ಈ ಬಾರಿ ಮಳೆ ಇಲ್ಲದಿದ್ದರೂ ಮುಂದೆ ಮಳೆ ಬರುತ್ತದೆ ಎಂಬ ನಂಬಿಕೆ ಮೇಲೆ ಬೀಜ ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ರೈತ ಕೇಶವ ಬಾಬು ಹಾರೂಗೇರಿ. ಅರಿಶಿಣ ಕೃಷಿ ರೈತರಿಗೆ ಪರಿಶ್ರಮದ ಬೆಳೆಯಾಗಿದ್ದರೂ ಸಾಂಗ್ಲಿಯ ಅರಿಶಿಣ ಮಾರುಕಟ್ಟೆಯಲ್ಲಿ ಈ ಬಾರಿ ಕ್ವಿಂಟಾಲ್ಗೆ 15,000 ರೂ. ಇದೆ. ಮುಂದಿನ ದಿನದಲ್ಲಿ ಲಾಭದ ನಿರೀಕ್ಷೆಯಿಟ್ಟುಕೊಂಡು ರೈತರು ಈಗಲೇ ಬೀಜ ಖರೀದಿಗೆ ಸಜ್ಜಾಗಿದ್ದಾರೆ.