

ಸರಗೂರು: ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಕ್ಷಯರೋಗ ಹರಡದಂತೆ ತಡೆಗಟ್ಟಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಬಾನುಲಿ ಕೇಂದ್ರ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಒಂದು ವರ್ಷದಲ್ಲಿ 10ರಿಂದ 15 ಜನರಿಗೆ ರೋಗ ಹರಡುತ್ತಾನೆ. ಕ್ಷಯರೋಗವು ಮೈಕ್ರೋ ಬ್ಯಾಕ್ಟೀರಿಯಾಗಳು ತುಂತುರು ಹನಿಗಳ ಮುಖಾಂತರ ಒಬ್ಬರಿಂದ ಒಬ್ಬರಿಗೆ ಅವರು ಸೇವಿಸುವ ಗಾಳಿಯ ಮುಖಾಂತರ ಹರಡುತ್ತದೆ ಎಂದು ಹೇಳಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಇದ್ದಾಗ ರಾತ್ರಿ ವೇಳೆಯಲ್ಲಿ ಜ್ವರ ಬರುವುದು, ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು ಕಾಣಿಸಿಕೊಳ್ಳುವುದು ಇತ್ಯಾದಿ ಲಕ್ಷಣಗಳು ಕ್ಷಯರೋಗದ ಗುಣಲಕ್ಷಣಗಳಾಗಿರುತ್ತವೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಕ್ಷಯರೋಗವನ್ನು ಕೊನೆಗೊಳಿಸಲು ಗ್ರಾಮ ಪಂಚಾಯಿತಿಗಳನ್ನು ಬಳಸಿಕೊಂಡು ಕ್ಷಯರೋಗ ಹರಡುವ ಬಗ್ಗೆ ಮಾಹಿತಿ ನೀಡುವುದು, ಶಂಕಿತ ರೋಗಿಗಳನ್ನು ಕಳಿಸುವ ಬಗ್ಗೆ ಅರಿವು ಮೂಡಿಸುವ ಯೋಜನೆ, ಪ್ರತಿ 1000 ಜನಸಂಖ್ಯೆಗೆ 30 ಶಂಕಿತ ಕ್ಷಯರೋಗಿಗಳ ಕಫ ಪರೀಕ್ಷೆ ಮಾಡಿಸುವುದು, ಕ್ಷ-ಕಿರಣ ತಪಾಸಣೆ ಹಾಗೂ ಗಂಟಲು ತಪಾಸಣೆ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.
ಕ್ಷಯರೋಗ ಪತ್ತೆಹಚ್ಚಲು ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ಷ್ಮದರ್ಶಕ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಕಫ ಪರೀಕ್ಷೆ ಸಂಗ್ರಹಿಸಿ ಸೂಕ್ಷ್ಮ ದರ್ಶಕ ಕೇಂದ್ರಕ್ಕೆ ರವಾನಿಸುವ ಮೂಲಕ ವ್ಯವಸ್ಥೆ ಇರಲಿದೆ. ಸರಗೂರು ಮತ್ತು ಕೋಟೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಆಧುನಿಕವಾದ ಟ್ರೂನ್ಯಾಟ್ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಉಪಕರಣದಿಂದ ಕ್ಷಯರೋಗವನ್ನು ಶೀಘ್ರವಾಗಿ ಕಂಡು ಹಿಡಿಯಬಹುದು. ಪಟ್ಟಣದ ಸ್ವಾಮಿವಿವೇಕಾನಂದ ಆಸ್ಪತ್ರೆಯಲ್ಲಿಯೂ ಕ್ಷಯರೋಗಕ್ಕೆ ಸಂಬಂಧಿಸಿದಂತೆ ಉಚಿತ ಚಿಕಿತ್ಸೆ, ಕ್ಷ-ಕಿರಣ ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರ ಆಸ್ಪತ್ರೆಯಲ್ಲಿ ಸಹ ಕ್ಷ-ಕಿರಣ ವ್ಯವಸ್ಥೆ ಮಾಡಲಾಗಿದೆ ಎಂದರು.
ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಚಿಕಿತ್ಸೆ ಸಮಯದಲ್ಲಿ ಮಾಸಿಕ 500 ರೂ.ನಂತೆ 6 ತಿಂಗಳವರೆಗೆ ಅವರ ಬ್ಯಾಂಕ್ ಖಾತೆಗೆ ಮೂರು ಸಾವಿರ ರೂ.ಗಳನ್ನು ನಿಕ್ಷಯ ಪೋಷಣ್ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ನಿಕ್ಷಯ ಮಿತ್ರ ಯೋಜನೆಯಡಿಲ್ಲಿ ದಾನಿಗಳ ಸಹಾಯದಿಂದ ಕ್ಷಯರೋಗಿಗಳನ್ನು ದತ್ತು ಪಡೆದು 6 ತಿಂಗಳವರಿಗೆ ಚಿಕಿತ್ಸೆ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುವುದು ಎಂದರು.
ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು, ಸಿಬ್ಬಂದಿ ಶಿವಲಿಂಗ ಹ್ಯಾಂಡ್ ಪೋಸ್ಟ್, ಲೀಲಾವತಿ, ಶ್ರೀಕಾಂತ್, ಸ್ಪೂರ್ತಿ, ಅನಿತಾ ಮತ್ತಿತರರು ಹಾಜರಿದ್ದರು.