

ರಿಪ್ಪನ್‌ಪೇಟೆ: ಬೆಂಗಳೂರಿನ ವಸುಧೈವ ಕುಟುಂಬಕಂ ಚಾರಿಟಬಲ್ ಟ್ರಸ್ಟ್, ಯುಎಸ್‌ಟಿ ಕಂಪನಿ ಸಹಭಾಗಿತ್ವದಲ್ಲಿ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಅಕ್ಷರ ದಾಸೋಹ ಕೊಠಡಿ ನಿರ್ಮಾಣ ಮಾಡಿದ್ದು ಶನಿವಾರ ಉದ್ಘಾಟನೆ ಮಾಡಲಾಯಿತು.
ಟ್ರಸ್ಟ್ ಮುಖ್ಯಸ್ಥ ಶ್ರೀಕಿಶೋರ್ ನಾರಾಯಣ ಮಾತನಾಡಿ, ಕೆಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವಾ ಕಾರ್ಯ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶ ಸಮಗಾರು ಶಾಲೆ ಅಭಿವೃದ್ಧಿಗೂ ಆಸಕ್ತಿ ವಹಿಸಿದೆ. ಮಕ್ಕಳಿಗೆ ಊಟದ ತಟ್ಟೆ, ಕುಡಿಯುವ ನೀರು ಇನ್ನಿತರ ಮೂಲ ಸೌಕರ್ಯ ನೀಡುತ್ತ ಬಂದಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ 3 ಲಕ್ಷ ರೂ.ಗೂ ಅಧಿಕ ಹಣ ವ್ಯಯ ಮಾಡಿ ನೂತನ ದಾಸೋಹ ಕೊಠಡಿ ನಿರ್ಮಿಸಲಾಗಿದೆ ಎಂದರು.
ಬಿಇಒ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ದಾನಿಗಳು ತಮ್ಮ ದೇಣಿಗೆ ಹಾಗೂ ಶ್ರಮದಿಂದ ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ. ಕುಗ್ರಾಮದ ಶಾಲೆಯನ್ನು ಆಕರ್ಷಕ ಶಾಲೆಯನ್ನಾಗಿ ರೂಪಿಸುವಲ್ಲಿ ಚಾರಿಟಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕಿ ರತ್ನಾಕುಮಾರಿ, ಅಕ್ಷರ ದಾಸೋಹದ ಶೇಷಾಚಲ ನಾಯಕ್, ದೀಪಾ, ಶಿಕ್ಷಕಿ ಅಂಬಿಕಾ ಇತರರಿದ್ದರು.