ಅಮೆರಿಕದವರನ್ನೇ ನೇಮಿಸಿಕೊಳ್ಳಿ! ಗೂಗಲ್, ಮೈಕ್ರೋಸಾಫ್ಟ್, ಮೆಟಾಗೆ ಟ್ರಂಪ್ ತಾಕೀತು; ಟಿ ವಲಯದಲ್ಲಿ ಆತಂಕ

ವಿಜಯವಾಣಿ (59)
Published on

ವಾಷಿಂಗ್ಟನ್: ಭಾರತದ ತಂತ್ರಜ್ಞರಿಗೆ ಕೆಲಸ ಕೊಡುವುದನ್ನು ಕೂಡಲೇ ನಿಲ್ಲಿಸಿ, ನಿಮ್ಮ ಕಂಪನಿಗಳಲ್ಲಿ ಅಮೆರಿಕದ ತಂತ್ರಜ್ಞರಿಗೇ ಹೆಚ್ಚು ಅವಕಾಶ ಕೊಡಿ. ಗೂಗಲ್, ಮೈಕ್ರೋಸಾಫ್ಟ್, ಮೆಟಾ ಮುಂತಾದ ಪ್ರಮುಖ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ತಾಕೀತು ಮಾಡಿದ ಪರಿ ಇದು.

ಆಲ್-ಇನ್ ಪಾಡ್​ಕಾಸ್ಟ್ ಮತ್ತು ಹಿಲ್ ವ್ಯಾಲಿ ಫೋರಂ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ತಂತ್ರಜ್ಞಾನ ಉದ್ಯಮಿಗಳ ಜಾಗತಿಕ ಮನಸ್ಥಿತಿಯನ್ನು ತೀವ್ರವಾಗಿ ಟೀಕಿಸಿದರು. ‘ನಮ್ಮ ಅನೇಕ ದೊಡ್ಡ ಕಂಪನಿಗಳು ಅಮೆರಿಕದ ಸ್ವಾತಂತ್ರ್ಯದ ಲಾಭ ಪಡೆದಿವೆ, ಆದರೆ ಚೀನಾದಲ್ಲಿ ಕಾರ್ಖಾನೆ ಸ್ಥಾಪಿಸುತ್ತಿವೆ, ಭಾರತದಲ್ಲಿ ಕಾರ್ವಿುಕರನ್ನು ನೇಮಿಸಿಕೊಳ್ಳುತ್ತಿವೆ. ಅಮೆರಿಕನ್ನರನ್ನು ಉಪೇಕ್ಷಿಸುತ್ತಿವೆ. ಇಂತಹ ನಡವಳಿಕೆಯ ದಿನಗಳು ಮುಗಿದಿವೆ, ಇನ್ನು ಮುಂದೆ ನನ್ನ ಆಡಳಿತದಲ್ಲಿ ಹೀಗೆ ನಡೆಯಲು ಬಿಡುವುದಿಲ್ಲ’ ಎಂದು ಅವರು ಎಚ್ಚರಿಸಿದರು.

ಅಮೆರಿಕಾ ಫಸ್ಟ್: ‘ಅಮೆರಿಕ ಮೊದಲು’ ಎಂಬ ತಮ್ಮ ನೀತಿಯನ್ನು ಟ್ರಂಪ್ ಪುನರುಚ್ಚರಿಸಿದರು. ‘ಅಮೆರಿಕದ ತಂತ್ರಜ್ಞಾನ ಕಂಪನಿಗಳು ಸಂಪೂರ್ಣವಾಗಿ ಅಮೆರಿಕಕ್ಕಾಗಿ ಕೆಲಸ ಮಾಡಬೇಕು. ಅಮೆರಿಕಕ್ಕೇ ಮೊದಲ ಆದ್ಯತೆ ನೀಡಬೇಕು’ ಎಂದು ಸಿಲಿಕಾನ್ ವ್ಯಾಲಿಯ ಕಂಪನಿಗಳಿಗೆ ಒತ್ತಾಯಿಸಿದರು.

3 ಆದೇಶಗಳಿಗೆ ಸಹಿ: ದೇಶೀಯ ಎಐ ಉದ್ಯಮ ಬಲಪಡಿಸುವ ಗುರಿಯುಳ್ಳ 3 ಕಾರ್ಯನಿರ್ವಾಹಕ ಆದೇಶಗಳಿಗೆ ಟ್ರಂಪ್ ಈ ಶೃಂಗಸಭೆಯಲ್ಲಿ ಸಹಿ ಹಾಕಿದರು. ‘ವಿನ್ನಿಂಗ್ ದಿ ರೇಸ್’ ಎಂಬ ಯೋಜನೆಯಡಿ, ಡೇಟಾ ಸೆಂಟರ್​ಗಳ ನಿರ್ಮಾಣ ಹೆಚ್ಚಳ, ಎಐಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು, ಎಐನಲ್ಲಿ ಅಮೆರಿಕವನ್ನು ವಿಶ್ವದ ಮುಂಚೂಣಿ ರಾಷ್ಟ್ರ ಆಗಿಸುವುದು ಈ ಆದೇಶಗಳ ಗುರಿಯಾಗಿದೆ.

ಎಐ ಅಲ್ಲ, ಜೀನಿಯಸ್: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪದ ಬಳಕೆಯನ್ನೇ ಟ್ರಂಪ್ ವಿರೋಧಿಸಿದರು. ‘ಈ ತಂತ್ರಜ್ಞಾನವನ್ನು ಜೀನಿಯಸ್ ಅಂತ ಕರೆಯುವುದು ಉತ್ತಮ. ಇದು ತಂತ್ರಜ್ಞಾನದ ಶಕ್ತಿಯನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ’ ಎಂದು ಸೂಚಿಸಿದರು.

ದೀರ್ಘಕಾಲೀನ ಪರಿಣಾಮ

ಟ್ರಂಪ್ ಹೇಳಿಕೆಯಿಂದ ತಕ್ಷಣದ ಪರಿಣಾಮ ಆಗದೇ ಇರಬಹುದು. ಆದರೆ ಭವಿಷ್ಯದಲ್ಲಿ ಭಾರತದ ಐಟಿ ವೃತ್ತಿಪರರಿಗೆ ಮತ್ತು ಔಟ್​ಸೋರ್ಸಿಂಗ್ ಕಂಪನಿಗಳಿಗೆ ಹೆಚ್ಚಿನ ಅಡೆತಡೆ ಸೃಷ್ಟಿಯಾಗಬಹುದು. ಭಾರತದ ಐಟಿ ಉದ್ಯಮ ಜಾಗತಿಕ ತಂತ್ರಜ್ಞಾನ ಕಂಪನಿಗಳಿಗೆ ಪ್ರಮುಖ ಕೇಂದ್ರವಾಗಿದ್ದು, ಸಿಲಿಕಾನ್ ವ್ಯಾಲಿಯಲ್ಲಿ 1,000ಕ್ಕೂ ಹೆಚ್ಚು ಭಾರತೀಯರು ಸ್ಥಾಪಿಸಿದ ಕಂಪನಿಗಳು 40 ಶತಕೋಟಿ ಡಾಲರ್​ಗಿಂತಲೂ ಹೆಚ್ಚಿನ ಮೌಲ್ಯ ಹೊಂದಿವೆ.

ಭಾರತದ ಐಟಿ ಉದ್ಯಮದ ಮೇಲೇನು ಪರಿಣಾಮ?

ಟ್ರಂಪ್ ಹೇಳಿಕೆ ಭಾರತದ ಐಟಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಈಗ ಗೂಗಲ್, ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್​ನಂಥ ದೈತ್ಯ ಕಂಪನಿಗಳಿಗೆ ಭಾರತವೇ ಪ್ರಮುಖ ಔಟ್​ಸೋರ್ಸಿಂಗ್ ಕೇಂದ್ರವಾಗಿದೆ. ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರು ಈ ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಸೇರಿದಂತೆ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ.

ಐಟಿ ಕಂಪನಿಗಳಿಗೆ ಸವಾಲು

ಗೂಗಲ್, ಮೈಕ್ರೋಸಾಫ್ಟ್, ಮೆಟಾ ಮುಂತಾದ ಕಂಪನಿಗಳು ಟ್ರಂಪ್ ಹೇಳಿಕೆಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಟ್ರಂಪ್​ರ ಒತ್ತಡದಿಂದಾಗಿ ಈ ಕಂಪನಿಗಳು ತಮ್ಮ ಜಾಗತಿಕ ಕಾರ್ಯತಂತ್ರಗಳನ್ನು ಮರುಪರಿಶೀಲನೆ ಮಾಡಬಹುದು. ಭಾರತದಲ್ಲಿನ ತಮ್ಮ ಉದ್ಯೋಗಿಗಳನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಈ ಕಂಪನಿಗಳು ದೊಡ್ಡ ಹೂಡಿಕೆ ಮಾಡಿವೆ. ಉದಾಹರಣೆಗೆ, ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಎನ್​ವಿಡಿಯಾದಂಥ ಕಂಪನಿಗಳು ಈ ವರ್ಷ ಡೇಟಾ ಸೆಂಟರ್​ಗಳು ಮತ್ತು ಎಐ ಮೂಲಸೌಕರ್ಯಕ್ಕಾಗಿ 320 ಶತಕೋಟಿ ಡಾಲರ್​ಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿವೆ. ಎನ್​ವಿಡಿಯಾ ಮುಂದಿನ 4 ವರ್ಷಗಳಲ್ಲಿ 500 ಶತಕೋಟಿ ಡಾಲರ್ ಖರ್ಚು ಮಾಡಲಿದೆ.

ಮುಂದೇನು? ತಜ್ಞರ ಎಚ್ಚರಿಕೆ

ಅಮೆರಿಕದ ಎಚ್-1ಬಿ ವೀಸಾಗಳನ್ನು ಭಾರತೀಯ ಐಟಿ ಉದ್ಯೋಗಿಗಳು ವ್ಯಾಪಕವಾಗಿ ಬಳಸುತ್ತಾರೆ. ಅವರು ಇನ್ನು ಮುಂದೆ ಟ್ರಂಪ್ ಆಡಳಿತದಿಂದ ಕಠಿಣ ನಿರ್ಬಂಧಗಳಿಗೆ ಒಳಗಾಗಬಹುದು. ಅಮೆರಿಕದ ಕ್ಲೈಂಟ್​ಗಳಿಗೆ ಸೇವೆ ಸಲ್ಲಿಸುವ ಜಾಗತಿಕ ಮಾದರಿಯನ್ನು ಅವಲಂಬಿಸಿರುವ ಭಾರತದ ಟಿಸಿಎಸ್, ಇನ್ಪೋಸಿಸ್, ವಿಪೋ›ದಂಥ ಕಂಪನಿಗಳಿಗೆ ತೊಂದರೆ ಆಗಬಹುದು ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net