'ಉದಯಪುರ್​ ಫೈಲ್ಸ್'ಗೆ ತಪ್ಪದ ಸಂಕಷ್ಟ! ಚಿತ್ರದ ರಿಲೀಸ್​ಗೆ ಭಾರೀ ವಿರೋಧ; ಏನಿದು ಕಾನೂನು ಸಮರ? | Udaipur Files

ವಿಜಯವಾಣಿ (65)
Published on

Udaipur Files: ನೈಜ ಘಟನೆ ಆಧರಿತ ‘ಉದಯಪುರ್​ ಫೈಲ್ಸ್’ ಚಿತ್ರ ಸದ್ಯ ಭಾರೀ ವಿವಾದದಲ್ಲಿ ಸಿಲುಕಿಕೊಂಡಿದೆ. ಈ ವಿಷಯ ಕೇವಲ ವಿರೋಧಗಳಿಂದ ಮಾತ್ರ ತುಂಬದೆ, ಕಾನೂನು ಸಮರದಲ್ಲಿ ತೊಡಗಿದೆ. ಹೈಕೋರ್ಟ್​ ಮೆಟ್ಟಿಲೇರಿದ್ದ ಸಿನಿಮಾ ನಿರ್ಮಾಪಕರಿಗೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಕೋರ್ಟ್​ನಲ್ಲಿ ತಮ್ಮ ಚಿತ್ರದ ಬಿಡುಗಡೆಗಾಗಿ ತೀವ್ರ ಕಾನೂನು ಹೋರಾಟ ನಡೆಸುತ್ತಿದ್ದ ಚಿತ್ರತಂಡಕ್ಕೆ ಸುಪ್ರೀಂ ಕೋರ್ಟ್​ನಲ್ಲಿಯೂ ಅನುಮತಿ ಸಿಗದಿರುವುದು ಸದ್ಯ ದುರಾದೃಷ್ಟಕರ.

ದೆಹಲಿ ಹೈಕೋರ್ಟ್​ನಿಂದ ಸುಪ್ರೀಂ ಅಂಗಳಕ್ಕೆ ಹೋಗಿರುವ ಉದಯ್​ಪುರ್​ ಫೈಲ್ಸ್ ಚಿತ್ರಕ್ಕೆ ಯಾವುದೇ ಕಾರಣಕ್ಕೂ ಬಿಡುಗಡೆ ಭಾಗ್ಯ ಕೊಡಬಾರದು. ಇದರಿಂದ ತಪ್ಪು ಸಂದೇಶ ಕೊಟ್ಟಂತಾಗಲಿದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ವಾದಿಸಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಚಿತ್ರದಲ್ಲಿನ ಆರು ಸೀನ್​ಗಳನ್ನು ಕಟ್​ ಮಾಡುವಂತೆ ಚಿತ್ರತಂಡಕ್ಕೆ ಹೇಳಿ, ಬಿಡುಗಡೆ ಭಾಗ್ಯವನ್ನು ನೀಡಲು ಮುಂದಾಗಿತ್ತು. ಆದರೆ, ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ ಅರ್ಷದ್​, ಈ ಚಿತ್ರದಲ್ಲಿ ಎಲ್ಲಾ ಭಾರತೀಯ ಮುಸ್ಲಿಮರನ್ನು ಭಯೋತ್ಪಾದನಾ ಬೆಂಬಲಿಗರಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಚಿತ್ರವು ಮುಸ್ಲಿಂ ಸಮುದಾಯವನ್ನು ಅನ್ಯಾಯವಾಗಿ ನಿಂದಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ನಕಾರಾತ್ಮಕ ಬೆಳಕನ್ನು ಚೆಲ್ಲುತ್ತದೆ. ಸಿನಿಮಾವನ್ನು ರಿಲೀಸ್ ಮಾಡುವುದರಿಂದ ಕೋಮು ಗಲಭೆ, ಉದ್ವಿಗ್ನತೆಗೆ ಪ್ರಚೋದಿಸುವ ಸಾಧ್ಯತೆಗಳು ಹೆಚ್ಚಿವೆ. ನಿರ್ಮಾಪಕರು ಕೋಮು ಮತ್ತು ರಾಜಕೀಯ ದ್ವೇಷವನ್ನು ಹರಡುವ ಇತಿಹಾಸವನ್ನು ಹೊಂದಿದ್ದಾರೆ. ಈ ಪ್ರಚೋದನೆಯು ದುರುದ್ದೇಶಪೂರಿತ ಮಾತ್ರವಲ್ಲ, ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಸಲುವಾಗಿ ಹಾಗೂ ಅಂತಹ ದೃಷ್ಟಿಕೋನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ" ಎಂದು ಅರ್ಷದ್​ ವಾದಿಸಿದ್ದಾರೆ.

ಏನೀ ವಿವಾದ?

ಈ ಹಿಂದೆಯೇ ನಿಗದಿಪಡಿಸಿದಂತೆ ಜುಲೈ 11ರಂದು ತೆರೆಗೆ ಅಪ್ಪಳಿಸಬೇಕಿದ್ದ ಬಹುನಿರೀಕ್ಷಿತ ಉದಯಪುರ್​ ಫೈಲ್ಸ್ ಚಿತ್ರದ​ ಬಿಡುಗಡೆಯನ್ನು ಸದ್ಯ ದೆಹಲಿ ನ್ಯಾಯಾಲಯ ತೆಡೆ ಹಿಡಿದಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ‘ಟೈಲರ್ ಕನ್ಹಯ್ಯಾ ಲಾಲ್’ ಹತ್ಯೆಯನ್ನೇ ಆಧರಿಸಿ, ಚಿತ್ರೀಕರಣವನ್ನೂ ಮುಗಿಸಿರುವ ‘ಉದಯಪುರ ಫೈಲ್ಸ್’ ಚಿತ್ರವು ಸದ್ಯ ಹಲವಾರು ಆಕ್ಷೇಪಣೆಗಳನ್ನು ಎದುರಿಸಿದೆ. ಇದರೊಟ್ಟಿಗೆ ಟೀಕೆ ಮತ್ತು ರಿಲೀಸ್​ ಆಗಬಾರದು ಎಂಬ ಆಗ್ರಹಗಳಿಂದಲೇ ಕೂಡಿದೆ.

ಈಗಾಗಲೇ ಟ್ರೇಲರ್ ಮೂಲಕವೇ​ ಭಾರೀ ಸದ್ದು ಹಾಗೂ ಸುದ್ದಿ ಮಾಡಿರುವ ಚಿತ್ರವು, ವಿವಾದಗಳಿಂದಲೇ ರಿಲೀಸ್ ನೋಡಲು ಹೆಣಗಾಡುತ್ತಿದೆ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿದ ಬೆನ್ನಲ್ಲೇ ಸೆನ್ಸಾರ್ ಮಂಡಳಿಯೂ ಚಿತ್ರತಂಡಕ್ಕೆ 150 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿರುವುದು ತಿಳಿದುಬಂದಿದೆ. ಆದರೆ, ಇದ್ಯಾವುದಕ್ಕೂ ಚಿತ್ರದ ನಿರ್ಮಾಪಕರು ಸುತಾರಾಮ್​ ಒಪ್ಪಿಲ್ಲ. ಅರ್ಜಿದಾರರಾದ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮತ್ತು ಪತ್ರಕರ್ತ ಪ್ರಶಾಂತ್ ಟಂಡನ್, ಚಿತ್ರದ ಬಿಡುಗಡೆಯ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

ಯಾರು ಈ ಕನ್ಹಯ್ಯಾ ಲಾಲ್?

ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಕಥೆಯೇನು? ಎಂದು ನೋಡುವುದಾದರೆ, 2022ರಲ್ಲಿ ಉದಯಪುರದಲ್ಲಿ ನಡೆದ ಕನ್ಹಯ್ಯಾ ಕೊಲೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಕನ್ಹಯ್ಯಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗಳನ್ನು ಬೆಂಬಲಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಕುಪಿತಗೊಂಡಿದ್ದ ಇಬ್ಬರು ವ್ಯಕ್ತಿಗಳು ಹಾಡಹಗಲೇ ಲಾಲ್​ರ ಅಂಗಡಿಗೆ ನುಗ್ಗಿ ಭೀಕರವಾಗಿ ಕೊಲೆಗೈದರು. ಇದು ಭಯೋತ್ಪಾದಕ ಸಂಘಟನೆ ಐಸಿಸ್ ಕೃತ್ಯ ಎಂದು ಆರೋಪಿಸಲಾಯಿತು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕನ್ಹಯ್ಯಾರನ್ನು ಇರಿದಿರುವುದು ಬಹಿರಂಗವಾಯಿತು. ಇದಲ್ಲದೆ, ಹತ್ಯೆಗೈದ ಬಳಿಕ ವಿಡಿಯೊವನ್ನು ರೆಕಾರ್ಡ್ ಮಾಡಿದ ದುಷ್ಕರ್ಮಿಗಳು, ಅದನ್ನು ಜಾಲತಾಣಗಳಲ್ಲಿ ಹರಿಬಿಟ್ಟರು. ಅಂದು ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಹುಟ್ಟುಹಾಕಿತು. ಆರೋಪಿಗಳನ್ನು ರಿಯಾಜ್ ಅಖ್ತರ್ ಮತ್ತು ಗೌಸ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರು.

ವಿವಾದಕ್ಕೆ ನಿರ್ದೇಶಕರು ಹೇಳುವುದೇನು?

‘ಉದಯಪುರ್​ ಫೈಲ್ಸ್’ ಚಿತ್ರದ ಬಿಡುಗಡೆ ಕುರಿತು ನಿರ್ದೇಶಕ ಭರತ್.ಎಸ್ ಶ್ರೀನೆಟ್ ಸ್ಪಷ್ಟನೆ ನೀಡಿದ್ದಾರೆ. “ಈ ಸಿನಿಮಾ ಒಂದು ಧರ್ಮದ ಬಗ್ಗೆ ಅಲ್ಲ, ನಂಬಿಕೆಯ ಕುರಿತಾಗಿದೆ. ಈ ಸಿನಿಮಾ ಕೇವಲ ಸಿದ್ಧಾಂತ ಮತ್ತು ಸತ್ಯದ ಬಗ್ಗೆ ಇರುತ್ತದೆ. ಯಾರ ಭಾವನೆಗಳಿಗೂ ನೋವುಂಟು ಮಾಡುವ ಯಾವುದೇ ವಿಷಯವಿಲ್ಲ” ಎಂದಿದ್ದಾರೆ. ಚಿತ್ರದಲ್ಲಿ ನಟ ವಿಜಯ್ ರಾಜಾ ಅವರು ಕನ್ಹಯ್ಯಾ ಲಾಲ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದುಗ್ಗಲ್, ರಜನೀಶ್, ಪ್ರೀತಿ ಘುಂಗಿಯಾನಿ, ಕಮಲೇಶ್, ಸಾವಂತ್, ಕಾಂಚಿ ಸಿಂಗ್, ಮುಷ್ತಾಕ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net