

Fahadh Faasil: ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ, ತಮ್ಮದೇ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ಪ್ರತಿಭಾವಂತ ನಟ ಫಹಾದ್ ಫಾಸಿಲ್, ತಾವು ನಟನೆಯಿಂದ ನಿವೃತ್ತಿ ಪಡೆದ ಬಳಿಕ ಯಾವ ಕೆಲಸವನ್ನು ಮಾಡಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 'ಪುಷ್ಪ' ನಟನ ಈ ಮಾತುಗಳು ಸದ್ಯ ಹಲವರ ಹುಬ್ಬೇರಿಸಿದೆ.
ಭಾರತೀಯ ಚಿತ್ರೋದ್ಯಮದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಫಹಾದ್, ಚಿತ್ರರಂಗದಿಂದ ನಿವೃತ್ತಿ ಪಡೆದ ನಂತರ ನಾನು ವಿದೇಶದಲ್ಲಿ ಕ್ಯಾಬ್ ಓಡಿಸುವ ಕೆಲಸ ಮಾಡುವ ಹಂಬಲವಿದೆ ಎಂದಿದ್ದಾರೆ. ಈ ಕುರಿತು ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಮಾತನಾಡಿದ ಫಾಸಿಲ್, ಸ್ಪೇನ್ ದೇಶದಲ್ಲಿ ಊಬರ್ ಕಾರು ಚಾಲಕನಾಗಿ ಕೆಲಸ ಮಾಡುವ ಮನಸ್ಸಿದೆ. ಕಾರಣ, ಯಾರೋ ಒಬ್ಬರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸೇರಿಸುವುದು ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ.
"ಈ ಹಿಂದೆ ನಾನು ಕೆಲ ಸಮಯ ಬಾರ್ಸಿಲೋನಾದಲ್ಲಿದ್ದೆ. ಆಗ ಡ್ರೈವಿಂಗ್ ಕೆಲಸ ಮಾಡುವ ಬಗ್ಗೆ ಆಲೋಚನೆ ಬಂತು. ನನಗೆ ಚಾಲನೆ ಮಾಡುವುದು ಅಂದ್ರೆ ಬಹಳ ಇಷ್ಟ. ಅವಕಾಶ ಸಿಕ್ಕಾಗಲೆಲ್ಲಾ ನನ್ನ ಕಾರನ್ನು ಹೊರಗೆ ತೆಗೆದುಕೊಂಡು ಹೋಗ್ತಿರುತ್ತೇನೆ. ಈಗಲೂ ಎಷ್ಟೋ ಸಲ ಅದನ್ನೇ ಮಾಡ್ತೀನಿ. ಅವಕಾಶ ಸಿಕ್ಕಾಗಲೆಲ್ಲಾ ಡ್ರೈವಿಂಗ್ ಮಾಡುವೆ. ಇದು ನನಗೆ ಇನ್ನೂ ತುಂಬಾ ಇಷ್ಟವಾಗುವ ಸಂಗತಿ" ಎಂದು ಫಹಾದ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).