ಟ್ರಂಪ್​ ಸುಂಕ ಸಮರ! ಭಾರತದಲ್ಲಿ ಐಫೋನ್ ಬೆಲೆ ದುಬಾರಿ? ತೆರಿಗೆ ಹೇಗೆ ಅನ್ವಯ? ಇಲ್ಲಿದೆ ಸಂಪೂರ್ಣ ಮಾಹಿತಿ | Trump Tariffs

ವಿಜಯವಾಣಿ (23)
Published on

Trump Tariffs: ಪ್ರಸ್ತುತ, ರಷ್ಯಾ ಮೇಲಿನ ಕೋಪವನ್ನು ಭಾರತದ ಮೇಲೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೇ.25ರಷ್ಟು ಸುಂಕದೊಂದಿಗೆ ಇನ್ನಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುಲು ಮುಂದಾಗಿರುವುದು ಆಘಾತಕಾರಿ ಬೆಳವಣಿಗೆ. ದೇಶದ ಮೇಲಿನ ಟ್ರಂಪ್ ಸುಂಕ ಸಮರ ಹೇಗೆಲ್ಲ ಪರಿಣಾಮ ಬೀರಲಿದೆ? ಇದು ಭಾರತದಿಂದ ಅನೇಕ ರಫ್ತುಗಳ ಮೇಲೆ ಯಾವ ಮಟ್ಟಿಗೆ ತೊಂದರೆ ಸೃಷ್ಟಿಸಲಿದೆ ಎಂಬುದರ ವಿವರ ಹೀಗಿದೆ ಗಮನಿಸಿ.

ಭಾರತದಿಂದ ಅಮೆರಿಕಾಗೆ ಆ್ಯಪಲ್ ಐಫೋನ್ ರಫ್ತಿಗೆ ಸುಂಕಗಳು ಪರಿಣಾಮ ಬೀರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಟ್ರಂಪ್ ಏಪ್ರಿಲ್ 2025ರಲ್ಲಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ಘೋಷಿಸಿದ ವಿನಾಯಿತಿ. ಪ್ರಸ್ತುತ, ದೇಶವು ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಈಗಾಗಲೇ ಚೀನಾವನ್ನು ಮೀರಿಸಿ ಯುಎಸ್​ನಲ್ಲಿ ಅಗ್ರ ಉತ್ಪಾದಕವಾಗಿದೆ. ಚೀನಾದಿಂದ ದೂರ ಉಳಿದಿರುವ ಆ್ಯಪಲ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದೆ.

ಅಮೆರಿಕ ವಾಣಿಜ್ಯ ಇಲಾಖೆಯು ವ್ಯಾಪಾರ ವಿಸ್ತರಣಾ ಕಾಯ್ದೆಯ ಸೆಕ್ಷನ್ 232ರ ಅಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಮುಖ್ಯವಾದ ವಲಯಗಳಾದ ಸೆಮಿಕಂಡಕ್ಟರ್‌ಗಳ ಬಗ್ಗೆ ಪರಿಶೀಲಿಸುತ್ತಿದೆ. ಅಲ್ಲಿಯವರೆಗೆ, ಭಾರತದಿಂದ ರಫ್ತು ಮಾಡಲಾದ ಐಫೋನ್‌ಗಳ ಮೇಲೆ ನಮಗೆ ಯಾವುದೇ ಸುಂಕಗಳು ಪರಿಣಾಮ ಬೀರದಿರಬಹುದು.

ಭಾರತದಿಂದ ರಫ್ತಾಗುವ ಐಫೋನ್​ ಮೇಲೆ ಸುಂಕ?

ಭಾರತದಿಂದ ರಫ್ತಾಗುವ ಐಫೋನ್​ಗಳು ಸುಂಕದ ಸ್ಲಾಟ್‌ಗೆ ಒಳಪಟ್ಟರೆ, ಅದು ಆ್ಯಪಲ್‌ಗೆ ಸ್ವಲ್ಪ ಜಟಿಲವಾಗಲಿದೆ. ಕಂಪನಿಯು ಭಾರತದಿಂದ ರಫ್ತು ಮಾಡುವುದನ್ನು ಮುಂದುವರಿಸಿದರೆ, ಆ್ಯಪಲ್ ಲಾಭದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಯುಎಸ್‌ನಲ್ಲಿ ಐಫೋನ್‌ಗಳ ಬೆಲೆಯನ್ನು ತೀವ್ರವಾಗಿ ಹೆಚ್ಚಿಸುವ ಅನಿವಾರ್ಯತೆ ಎದುರಾಗುತ್ತದೆ. ಆಗ ಅಮೆರಿಕದಲ್ಲಿ ಐಫೋನ್ ಪ್ರಿಯರಿಗೆ ದೊಡ್ಡ ಶಾಕ್ ಕಾಡುವುದು ಬಹುತೇಕ ಖಚಿತ.

ಅದೇ ರೀತಿ, ಸುಂಕದ ವಿಷಯದಲ್ಲಿ ಭಾರತವೂ ಪರಿಣಾಮ ಬೀರಬಹುದು. ಸುಂಕಗಳಿಂದಾಗಿ ಭಾರತದಿಂದ ಆ್ಯಪಲ್‌ನ ರಫ್ತುಗಳು ಶೇ.40ರಿಂದ 50ರಷ್ಟು ಕಡಿಮೆಯಾಗಬಹುದು. ಇದೇನಾದರೂ ಸಂಭವಿಸಿದಲ್ಲಿ, ಇದು ಮುಂಬರುವ ಐಫೋನ್ 17 ಸಿರೀಸ್​ ಮಾರಾಟ ಮತ್ತು ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಟ್ರಂಪ್‌ ಸುಂಕಗಳು ಭವಿಷ್ಯದಲ್ಲಿ ಆ್ಯಪಲ್‌ನ ಭಾರತದ ರಫ್ತಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ವಾಸ್ತವವಾಗಿ, ಟ್ರಂಪ್ ಸುಂಕವನ್ನು ಶೇ.25ರಿಂದ 50ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇದು 21 ದಿನಗಳ ಬಳಿಕ ಜಾರಿಯಾಗಲಿದೆ. ಆದಾಗ್ಯೂ, ಪ್ರಸ್ತುತ ಶೇ.25ರಷ್ಟು ನಿಯಮ ಮಾತ್ರ ಅನ್ವಯಿಸಲಿದೆ. ಟ್ರಂಪ್‌ ಸುಂಕ ಹೆಚ್ಚಳ ನಿರ್ಧಾರವು ಐಫೋನ್‌ಗಳ ಬೆಲೆಗಳನ್ನು ಹೆಚ್ಚಿಸುತ್ತದೆಯೇ ಎಂಬ ಪ್ರಶ್ನೆ ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಆ್ಯಪಲ್ ಬಿಡಿ ಭಾಗಗಳ ಮೇಲೆ ವಿಶೇಷ ಸುಂಕವಿರುತ್ತವೆ. ವರದಿಗಳ ಪ್ರಕಾರ, ಆ್ಯಪಲ್ ಸಾಧನಗಳನ್ನು ವಿಶೇಷ ಸುಂಕ ಚೌಕಟ್ಟಿನಡಿಯಲ್ಲಿ ತರುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು. ಇದರರ್ಥ ಐಫೋನ್‌ಗಳು ಇನ್ಮುಂದೆ ಟ್ರಂಪ್ ವಿಧಿಸಿದ ತೆರಿಗೆ ಹೆಚ್ಚಳಕ್ಕೆ ಒಳಪಡುವುದಿಲ್ಲ.

ಐಫೋನ್ 17 ರಿಲೀಸ್​ ಯಾವಾಗ?

ಐಫೋನ್ 17 ಸಿರೀಸ್​ ಮುಂದಿನ ತಿಂಗಳು ಗ್ರಾಹಕರ ಕೈಸೇರಲಿದೆ. ಇದೇ ಸೆಪ್ಟೆಂಬರ್‌ನಲ್ಲಿ ತನ್ನ ಹೊಸ ಸಿರೀಸ್​ ಅನ್ನು ಅನಾವರಣಗೊಳಿಸಲು ಸಂಸ್ಥೆ ಸಜ್ಜಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಸೆಪ್ಟೆಂಬರ್ 9, 2025ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಈ ರಿಲೀಸ್​ ದಿನಾಂಕ ಕುರಿತು ಸಂಸ್ಥೆ ಇನ್ನೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net