

ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆ. 9 ರಂದು ಶರಣ ನುಲಿಯ ಚಂದಯ್ಯ ಜಯಂತಿ ಆಚರಿಸಲಾಗುತ್ತಿದೆ.
ಅಂದು ಬೆಳಗ್ಗೆ 9.0ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬಳಿಕ 10.30ಕ್ಕೆ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸುವರು. ಸಚಿವ ಶಿವಾನಂದ ಎಸ್. ಪಾಟೀಲ ಉಪಸ್ಥಿತರಿರುವರು. ಶಾಸಕ ಬಸನಗೌಡ ಆರ್.ಪಾಟೀಲ (ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ ಎನ್, ನವದೆಹಲಿಯ ಕರ್ನಾಟಕ ಸರ್ಕಾದ ವಿಶೇಷ ಪ್ರತಿನಿಧಿ-2 ಹಾಗೂ ಶಾಸಕ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ ಅಧ್ಯಕ್ಷ, ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದ ರಮೇಶ ಜಿಗಜಿಣಗಿ ಹಾಗೂ ಸುಧಾ ಮೂರ್ತಿ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಭಾಗವಹಿಸುವರು.
ಸಾಹಿತಿ ಡಾ.ಮಾಧವ ಎಚ್. ಗುಡಿ ವಿಶೇಷ ಉಪನ್ಯಾಸ ನೀಡಲಿದ್ದು, ಗಿರಿಮಲ್ಲಪ್ಪ ಸತ್ಯಪ್ಪ ಭಜಂತ್ರಿ ಅವರು ಶಹನಾಯ್ ವಾದನ ಮತ್ತು ಗಾಯನ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.