

Rahul Gandhi: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಚುನಾವಣಾ ಆಯೋಗ ಕೈಜೋಡಿಸಿತ್ತು. ಇದಕ್ಕೆ ನಾನು ಒಂದಷ್ಟು ಸಾಕ್ಷಿಗಳನ್ನು ಕಲೆಹಾಕಿದ್ದೇನೆ ಎಂದು ರಾಹುಲ್ ಆರೋಪಿಸಿದ್ದಾರೆ. ಮತಗಳ್ಳತನ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ರಾಜ್ಯ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಗೆ ಲಿಖಿತ ಪತ್ರದ ಮೂಲಕ ಸವಾಲೆಸೆದಿದೆ.
ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ, "ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಪ್ಯಾರಾ 3ರಲ್ಲಿ ಉಲ್ಲೇಖಿಸಲಾದ ಮತದಾರರ ಪಟ್ಟಿಯಲ್ಲಿ ಅನರ್ಹ ಮತದಾರರ ಸೇರ್ಪಡೆ ಮತ್ತು ಅರ್ಹ ಮತದಾರರ ಹೊರಗಿಡುವಿಕೆಯ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ ಎಂದು ತಿಳಿದುಬಂದಿದೆ. 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಅಡಿಯಲ್ಲಿ ಲಗತ್ತಿಸಲಾದ ಘೋಷಣೆ/ಪ್ರಮಾಣವಚನಕ್ಕೆ ಸಹಿ ಹಾಕಿ ಹಿಂದಿರುಗಿಸಲು ವಿನಂತಿಸಲಾಗಿದೆ. ಇದರಿಂದಾಗಿ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು" ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
"ತಪ್ಪು ದಾಖಲೆ ನೀಡಿದರೆ ಸೆಕ್ಷನ್ 227 ಭಾರತ ನ್ಯಾಯ ಸಂಹಿತೆ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗುವುದು" ಎಂದು ಮತಗಳ್ಳತನ ಆರೋಪಕ್ಕೆ ಚುನಾವಣಾಧಿಕಾರಿಗಳು ತಿರುಗೇಟು ನೀಡಿದ್ದಾರೆ. ಇದರೊಂದಿಗೆ, ಸಹಿ ಮಾಡಿದ ಆಕ್ಷೇಪಣೆ ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿಗೆ ಸೂಚನೆ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಪ್ರಮಾಣವಚನ ಸ್ವೀಕರಿಸಿ, ಘೋಷಣಾ ಪತ್ರ ಸಲ್ಲಿಸಬೇಕು. ಇದು ಸಾಧ್ಯವಾಗಲಿಲ್ಲ ಎಂದಾದರೆ, ತಾವು ಕಟ್ಟಿರುವ ಸುಳ್ಳು ಕಥೆಯ ಸಾಕ್ಷ್ಯವನ್ನು ಹಿಂಪಡೆಯಬೇಕು ಎಂದು ಚುನಾವಣಾ ಆಯೋಗ ಸವಾಲು ಹಾಕಿದೆ.
ಕಳೆದ ವರ್ಷದಲ್ಲಿ (2024) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ವಿಧಾನಸಭೆಯ ಕ್ಷೇತ್ರದಲ್ಲಿ ಭಾರೀ ಮತಗಳ್ಳತನವಾಗಿದೆ. ಇದಕ್ಕಾಗಿ ಬಿಜೆಪಿ ಜೊತೆಗೆ ಚುನಾವಣಾ ಆಯೋಗ ಶಾಮಿಲಾಗಿರುವುದು ನಮ್ಮ ಪಕ್ಷದ ಆಂತರಿಕ ತನಿಖೆಯಿಂದ ಪತ್ತೆಯಾಗಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಭುಗಿಲೆದ್ದಿದೆ. ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಕಿಡಿಕಾರಿದ್ದು, ಇದೆಲ್ಲವೂ ಆಧಾರರಹಿತ ಎಂದು ಹೇಳಿದೆ.