

ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೇನಾ ಕಾಲೇಜಿನಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ನಂತರ ಮೆಟ್ಟಿಲುಗಳ ಮೂಲಕ ಇಳಿದು ಹೋಗಲು ಸಾಧ್ಯವಾಗಲಿಲ್ಲ. ಈ ವಿಷಯ ಭಾರಿ ಸುದ್ದಿಯಾಗಿತ್ತು. 74 ವರ್ಷದ ಟ್ರಂಪ್ ವಯೋಸಹಜ ಸಮಸ್ಯೆಯಿಂದಾಗಿ ಹೀಗಾಗಿದೆ ಎಂದೇ ವಿಶ್ಲೇಷಿಸಲಾಗಿತ್ತು.
ಆದರೆ ಇದನ್ನು ಒಪ್ಪದ ಟ್ರಂಪ್ ಹಾಗೂ ಅವರ ಬೆಂಬಲಿಗರು ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅವರು ರಾಜ್ಯಗಳ ಪ್ರವಾಸದಿಂದ ದಣಿದಿದ್ದಾರೆ ಎನ್ನುವ ಮೂಲಕ ಮಾತು ಮರೆಸಿದ್ದರು.
ಆದರೆ ಈಗ ಮತ್ತೊಮ್ಮೆ ಟ್ರಂಪ್ ಆರೋಗ್ಯದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅದೇನೆಂದರೆ, ಅಮೆರಿಕ ಸೇನಾ ಅಕಾಡೆಮಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅವರು ನೀರನ್ನು ಕುಡಿಯಲು ಗ್ಲಾಸ್ ಎತ್ತಿಕೊಂಡರು. ಮೊದಲ ಬಲಗೈ ಬಳಸಿದ್ದರು ಆದರೆ ಕೈ ನಡುಗಿ ನೀರು ಕುಡಿಯಲು ಆಗಲಿಲ್ಲ. ನಂತರ ಕಷ್ಟಪಟ್ಟ ಟ್ರಂಪ್ ನಂತರ ಎಡ ಗೈ ಸಹಾಯ ಪಡೆದುಕೊಂಡಿದ್ದಾರೆ.
ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಮತ್ತೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. ಸೋಷಿಯಲ್ ಮೀಡಿಯಾದಲ್ಲಿ ಇದು ಬಹಳ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಟ್ರಂಪ್ ಅವರಿಗೆ ಮೆದುಳಿನ ಸ್ವಲ್ಪ ಸಮಸ್ಯೆ ಇದ್ದು ತಪಾಸಣೆ ಅಗತ್ಯವಿದೆ ಎಂದು ಪ್ರಮುಖ ಮನೋವೈದ್ಯ ಡಾ. ಬೆಂಡಿ ಲೀ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷವೂ ಟ್ರಂಪ್ ಅವರ ಆರೋಗ್ಯದ ಬಗ್ಗೆ ಅವರು ವಾರ್ಷಿಕ ವರದಿ ಸಲ್ಲಿಸುವ ವೇಳೆ ಈ ವಿಷಯ ತಿಳಿಸಿದ್ದಾರೆ. ಆದರೆ ಇನ್ನೊಮ್ಮೆ ಅಮೆರಿಕದ ಅಧ್ಯಕ್ಷ ಸ್ಥಾನದ ಗದ್ದುಗೆ ಏರುವ ತಯಾರಿ ನಡೆಸಿರುವ ಟ್ರಂಪ್, ವಯಸ್ಸಿಗೂ ಮೀರಿದ ದೇಹ ದಾರ್ಢ್ಯತೆಯನ್ನು ಹೊಂದಿರುವುದಾಗಿ ಹೇಳುತ್ತಿದ್ದಾರೆ. (ಏಜೆನ್ಸೀಸ್)