

ನಲ್ಗೊಂಡ್ (ತೆಲಂಗಾಣ): ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ಭೂಮಿಯಲ್ಲಿ ನಡೆಯುವುದು ನಿಮಿತ್ತ ಮಾತ್ರ ಎನ್ನುವುದು ಬಹಳ ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಮಾತು. ಯಾರ ಜತೆ ಸಂಸಾರ ಮಾಡಬೇಕು ಎಂದು ಹಣೆಯಲ್ಲಿ ಬರೆದಿರುತ್ತದೆಯೋ ಅವರ ಜತೆಗೇ ಸಂಸಾರ ನಡೆಯುತ್ತದೆ, ವಿಧಿಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗುತ್ತದೆ.
ಈ ಮಾತು ನಿಜ ಎನ್ನುವುದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಎಂಬ ಊರಿನಲ್ಲಿ ನಡೆದ ಕುತೂಹಲದ ಘಟನೆಯೊಂದರಲ್ಲಿ ಸಾಬೀತಾಗಿದೆ.
ಅಷ್ಟಕ್ಕೂ ನಡೆದದ್ದು ಏನೆಂದರೆ, ಕುರಂಪಲ್ಲಿಯ 24 ವರ್ಷದ ಯುವತಿ ಮೋನಿಕಾ ಎಂಬಾಕೆಯ ಮದುವೆ ದೇವರಕೊಂಡ ಗ್ರಾಮದ ಯುವಕನೊಂದಿಗೆ ಪೋಷಕರು ನಿಶ್ಚಯ ಮಾಡಿದ್ದರು. ಮೋನಿಕಾ ಕೂಡ ಇದಕ್ಕೆ ಒಲ್ಲೆ ಎನ್ನಲಿಲ್ಲ, ಮದುವೆಗೆ ಒಪ್ಪಿದ್ದಳು. ಲಾಕ್ಡೌನ್ ಹಿನ್ನೆಲೆಯಲ್ಲಿ ತೀರಾ ಹತ್ತಿರದ ಸಂಬಂಧಿಕರ ನಡುವೆ, ಮೋನಿಕಾ ಮತ್ತು ಆಕೆಯ ಪತಿಯ ಪಾಲಕರ ಎದುರು ಸರಳವಾಗಿ ನಡೆಯಿತು.
ಮದುವೆ ಶಾಸ್ತ್ರ ಸಂಪೂರ್ಣಗೊಂಡ ಮೇಲೆ ಗಂಡನ ಮನೆಗೆ ಹೋಗಲು ಮೋನಿಕಾ ಹಿರಿಯರ ಕಾಲಿಗೆ ಬೀಳುತ್ತಿದ್ದಳು. ಅದಾಗಲೇ ಇವರ ಮದುವೆಗೊಂದು ಟ್ವಿಸ್ಟ್ ಸಿಕ್ಕಿದ್ದು!
ಇನ್ನೇನು ಗಂಡನ ಮನೆಗೆ ಹೊರಡಲು ನವವಧು ರೆಡಿ ಆಗುತ್ತಿದ್ದಂತೆಯೇ ಅತ್ತ ಕಡೆಯಿಂದ ಯುವಕನೊಬ್ಬ ಎಂಟ್ರಿ ಕೊಟ್ಟ. ಆತನನ್ನು ನೋಡಿದ ಮೋನಿಕಾ ಸುತ್ತಲೂ ಯಾರು ಇದ್ದಾರೆ ಎನ್ನುವುದನ್ನೂ ನೋಡದೇ, ಹೊಸದಾಗಿ ಮದುವೆಯಾಗಿರುವ ಗಂಡ ಪಕ್ಕದಲ್ಲಿ ಇದ್ದಾನೆ ಎನ್ನುವ ಅರಿವೂ ಇಲ್ಲದೇ, ಹಿರಿಹಿರಿ ಹಿಗ್ಗಿ ಆ ಯುವಕನನ್ನು ಹೋಗಿ ಅಪ್ಪಿ ಮುದ್ದಾಡಿ, ಕಣ್ಣೀರು ಸುರಿಸಿದಳು. ಈ ಘಟನೆ ನೋಡುತ್ತಿದ್ದಂತೆಯೇ ಅಲ್ಲಿದ್ದವರೆಲ್ಲರೂ ದಿಗ್ಭ್ರಾಂತರಾಗಿದ್ದಾರೆ!
ಅವಮಾನದಿಂದ ಮೋನಿಕಾ ಮನೆಯವರು ತಲೆತಗ್ಗಿಸಿದರೆ, ವರ ಮತ್ತು ಆತನ ಮನೆಯವರು ಕಂಗಾಲಾಗಿ ಹೋದರು. ತಡ ಮಾಡದ ವರ ತಮಗೆ ಅನ್ಯಾಯ ಆಗಿದೆ ಎಂದು ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ದಾಖಲು ಮಾಡಿದ.
ಪೊಲೀಸರು ಬಂದು ವಿಷಯ ಕೇಳಿದ್ದಾರೆ. ನಂತರ ತಿಳಿದದ್ದು ಏನೆಂದರೆ, ಅಲ್ಲಿಗೆ ಎಂಟ್ರಿ ಕೊಟ್ಟ ಯುವಕ ರಾಜೇಶ್. ಮೋನಿಕಾಳ ಮಾವ. ತುಂಬಾ ವರ್ಷಗಳಿಂದ ಇವರು ಪ್ರೀತಿಸುತ್ತಿದ್ದರು. ಈ ವಿಷಯ ಆಕೆಯ ಮನೆಯವರಿಗೂ ತಿಳಿದಿರಲಿಲ್ಲ. ಪ್ರೀತಿಯ ವಿಷಯ ಮನೆಯವರಿಗೆ ಹೇಳಲು ಭಯಪಟ್ಟಿದ್ದ ಮೋನಿಕಾ ಪಾಲಕರು ಹೇಳಿದ್ದ ಮದುವೆಗೆ ಒಪ್ಪಿಕೊಂಡು ತಾಳಿಯನ್ನೂ ಕಟ್ಟಿಸಿಕೊಂಡಿದ್ದಳು.
ಇಷ್ಟು ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಈ ಬಗ್ಗೆ ಪಂಚಾಯಿತಿ ಮಾಡಲಾಯಿತು. ಇಷ್ಟವಿಲ್ಲದ ಮದುವೆ ಮಾಡಿದರೆ ದಂಪತಿ ಸುಖವಾಗಿ ಇರಲು ಸಾಧ್ಯವಿಲ್ಲ ಕೊನೆಗೆ ಎಲ್ಲರೂ ತೀರ್ಮಾನ ಮಾಡಿ ಆಕೆಯ ಮದುವೆಯನ್ನು ರದ್ದು ಮಾಡಿದರು. ರಾಜೇಶ್ ಜತೆ ಮಾರನೆಯ ದಿನ ಮದುವೆ ಏರ್ಪಡಿಸಿದರು. ಗ್ರಾಮಸ್ಥರು, ಪಾಲಕರು ಎಲ್ಲರ ಆಶೀರ್ವಾದ ಪಡೆದ ಮೋನಿಕಾ ಸಂತೋಷದಿಂದ ಮದುವೆ ಮಾಡಿಕೊಂಡಳು.