

ನವದೆಹಲಿ: ಭಾರತ್ ಸ್ಟೇಜ್ 4 (ಬಿಎಸ್ 4) ವಾಹನಗಳ ಮಾರಾಟಕ್ಕೆ ತಾನು ನೀಡಿರುವ ಗಡುವು ಇದಾಗಲೇ ಮುಗಿದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ವಾಹನಗಳ ನೋಂದಣಿಯನ್ನೂ ಮಾಡುವಂತಿಲ್ಲ, ಜತೆಗೆ ಅವುಗಳ ಮಾರಾಟವನ್ನೂ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿತ್ತು. ಆದರೆ ತದನಂತರ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ, ಕೋರ್ಟ್ ನೀಡಿರುವ ಅವಧಿಯೊಳಕ್ಕೆ ಈ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಗೋಗರೆದಿದ್ದ ಭಾರತೀಯ ಆಟೋಮೊಬೈಲ್ ವಿತರಕರ ಸಂಘ (ಎಫ್‌ಎಡಿಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಈ ವಾಹನಗಳ ಮಾರಾಟದ ಅವಧಿಯನ್ನು ಸ್ವಲ್ಪ ಮಟ್ಟಿಗಾದರೂ ವಿಸ್ತರಿಸುವಂತೆ ಕೋರಿಕೊಂಡಿತ್ತು. 7 ಲಕ್ಷಕ್ಕೂ ಹೆಚ್ಚು ಬಿಎಸ್ 4 ದ್ವಿ ಮತ್ತು ನಾಲ್ಕು ಚಕ್ರಗಳು, ಸುಮಾರು 15,000 ಪ್ರಯಾಣಿಕ ಕಾರುಗಳು ಮತ್ತು ಸರಿಸುಮಾರು 6,400 ಕೋಟಿ ಮೌಲ್ಯದ ಟ್ರಕ್‌ಗಳು ಮಾರಾಟವಾಗದೆ ಉಳಿದಿವೆ ಎಂದು ಅದು ಹೇಳಿತ್ತು.
ನಂತರ ಸುಪ್ರೀಂಕೋರ್ಟ್, 2020 ಮಾರ್ಚ್ 31ಕ್ಕೆ ಮೊದಲು ಮಾರಾಟವಾಗಿ ತಾತ್ಕಾಲಿಕವಾಗಿ ನೋಂದಣಿಯಾಗಿರುವ ವಾಹನಗಳು ಹಾಗೂ ತೆರಿಗೆ ಮತ್ತು ಶುಲ್ಕ ಪಾವತಿಸಿರುವ ಹಾಗೂ ತೆರಿಗೆ ಕಟ್ಟಬೇಕಿರುವ ಎಲ್ಲಾ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 30ರವರೆಗೆ ಅವಕಾಶ ನೀಡಿತು.
ದೇಶದಲ್ಲಿ ಲಾಕ್ಡೌನ್ ತೆರವುಗೊಳಿಸಿದ ನಂತರ ವಿತರಕರು ತಮ್ಮ ಉಳಿದಿರುವ ಬಿಎಸ್ 4 ದಾಸ್ತಾನುಗಳಲ್ಲಿ 10 ಶೇಕಡಾವನ್ನು 10 ದಿನಗಳವರೆಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಅಂದರೆ ವಿಸ್ತರಣೆಯ ಅವಧಿಯಲ್ಲಿ ಕೇವಲ 1.05 ಲಕ್ಷ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಅನುಮತಿಸಲಾಗಿತ್ತು.
ಇದರ ಹೊರತಾಗಿಯೂ ನೋಂದಣಿ ಮುಂದುವರಿಸುತ್ತಿರುವ ಕೆಲವು ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಮಾರಾಟ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಮುಂದುವರೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದೇಶವನ್ನು ಉಲ್ಲಂಘಿಸಿ 2.25 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ ಎಂದು ವರದಿಯಾಗಿರುವ ಬಗ್ಗೆ ಕೋರ್ಟ್ ಕಿಡಿ ಕಾರಿದೆ.
ಬಿಎಸ್ 4 ನಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಷೇಧಿಸಲಾಗಿದೆ. ಅದರ ಬದಲು ಭಾರತ್ ಸ್ಟೇಜ್-6 (ಬಿಎಸ್-6) ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಭಾರತ್ ಸ್ಟೇಜ್ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ. ಬಿಎಸ್-4 ವಾಹನಗಳಲ್ಲಿ ಬಿಎಸ್-4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ. ಬಿಎಸ್-6 ವಾಹನಗಳಲ್ಲಿ ಬಿಎಸ್-6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್-4 ಪೆಟ್ರೋಲ್ ಇಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್-6 ಪೆಟ್ರೋಲ್ ವಾಹನಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದಿಲ್ಲ. ಬಿಎಸ್-6 ಪೆಟ್ರೋಲ್ ಇಂಜಿನ್‌ಗಳು ಉಗುಳುವ ಹೊಗೆಯಲ್ಲಿನ ಮಾಲಿನ್ಯಕಾರಕಗಳ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ. (ಏಜೆನ್ಸೀಸ್)