ರಷ್ಯಾ ಮೇಲಿನ ಕೋಪ ಭಾರತದ ಮೇಲೆ! ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ? ಏನಿದು ಟ್ರಂಪ್​ ಲೆಕ್ಕಾಚಾರ | Trump

ವಿಜಯವಾಣಿ (13)
Published on

Trump: ದೇಶದ ಮೇಲಿನ ಸುಂಕ ದರಗಳನ್ನು ಇನ್ನಷ್ಟು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿರುವುದು ಸದ್ಯ ಭಾರತವನ್ನು ಕೆರಳಿಸಿದೆ. ಮಂಗಳವಾರ (ಆ.05) ಸಿಎನ್‌ಬಿಸಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ. ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.

ಅಮೆರಿಕ ಈಗಾಗಲೇ ಭಾರತದ ಮೇಲೆ ಶೇ.25ರಷ್ಟು ಸುಂಕ ಮತ್ತು ಅದರೊಂದಿಗೆ ದಂಡವನ್ನು ಸಹ ವಿಧಿಸಿತು. ಇದು ಆಗಸ್ಟ್ 7ರಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿತು. ಅಸಲಿಗೆ, ಇಷ್ಟಕ್ಕೆಲ್ಲ ಕಾರಣ, ರಷ್ಯಾದಿಂದ ಭಾರತ ಖರೀದಿಸುತ್ತಿರುವ ತೈಲ. ಯುಕ್ರೇನ್ ಮೇಲಿನ ಯುದ್ಧವನ್ನು ಕೈಬಿಡುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ಗೆ ಟ್ರಂಪ್​ ಈಗಾಗಲೇ ಡೆಡ್​ಲೈನ್​ ನೀಡಿದ್ದಾರೆ. ಆದರೆ, ಇದ್ಯಾವುದಕ್ಕೂ ಬಗ್ಗದ ಪುಟಿನ್​, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅಮೆರಿಕಾಗೆ ತಿರುಗೇಟು ನೀಡಿದರು. ಸದ್ಯ ಇದು ಟ್ರಂಪ್​ ಸುಂಕ ಸಮರಕ್ಕೆ ಕಿಚ್ಚು ಹಚ್ಚಿದೆ.

ರಷ್ಯಾದಿಂದ ಭಾರತ ತೈಲ ಖರೀದಿ ಕಿಡಿ

“ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ. ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದರೆ, ನಾವು ಅವರೊಂದಿಗೆ ಹೆಚ್ಚು ವ್ಯವಹಾರ ಮಾಡೋದಿಲ್ಲ. ಹೀಗಾಗಿಯೇ, ಶೇ.25ರಷ್ಟು ಸುಂಕ ವಿಧಿಸುವುದಾಗಿ ನಿರ್ಧರಿಸಿದೆವು. ಆದರೆ, ಈಗ ಅದನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ. ಕಾರಣ, ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಈ ಮೂಲಕ ದೇಶ, ಯುಕ್ರೇನ್‌ ಮತ್ತು ರಷ್ಯಾ ಯುದ್ಧಕ್ಕೆ ಇಂಧನ ತುಂಬುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

ರಷ್ಯಾ ಮೇಲಿನ ಕೋಪವನ್ನು ಭಾರತದ ಮೇಲೆ ತೋರಿಸುತ್ತಿರುವ ಟ್ರಂಪ್​, ದೇಶವು ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಇದನ್ನೇ ಬಲವಾಗಿ ಪ್ರಶ್ನಿಸಿರುವ ಭಾರತ, 'ರಷ್ಯಾ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕ, ಅದೇ ರಷ್ಯಾದೊಂದಿಗೆ ಇಂದಿಗೂ ವ್ಯಾಪಾರ ಮಾಡುತ್ತಿರುವುದು ಏಕೆ? ವ್ಯವಹಾರ ನಡೆಸುತ್ತಿರುವ ಕಾರಣವೇನು?' ಎಂದು ಟೀಕಿಸಿದೆ.

ಭಾರತ ಕೇಳಿರುವ ಈ ಪ್ರಶ್ನೆಯನ್ನು ಮುಂದಿಟ್ಟ ಅಲ್ಲಿನ ಮಾಧ್ಯಮಗಳಿಗೆ ಉತ್ತರಿಸಿದ ಅಮೆರಿಕ ಅಧ್ಯಕ್ಷ, "ನನಗೆ ಅದರ ಬಗ್ಗೆ ಏನೂ ಮಾಹಿತಿ ಇಲ್ಲ. ಈ ಕುರಿತಂತೆ ಪರಿಶೀಲಿಸುವ ಅಗತ್ಯವಿದೆ. ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ನಿಮಗೆ ಉತ್ತರಿಸುತ್ತೇವೆ" ಎಂದು ಹೇಳಿ, ಅಲ್ಲಿಂದ ಕಾಲ್ಕಿತ್ತರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net