ಗಯಾನಾ ದೇಶದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯ ಗಿರೀಶ್ ಪಾಲೆ ಮೃತದೇಹ ಭಾರತಕ್ಕೆ ಆಗಮನ

Untitled design
Published on

ಬೆಂಗಳೂರು: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿಯಾದ ಪಿ.ಬಿ. ಗಿರೀಶ್​ ಬಾಬು ಪಾಲೆ ಎಂಬುವರು ದಕ್ಷಿಣ ಅಮೆರಿಕಾದ ಗಯಾನಾ ದೇಶದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ (ಜೂನ್​ 14,2025) ಸಾವನ್ನಪ್ಪಿದ್ದರು. ಅನಿವಾಸಿ ಭಾರತೀಯ ಸಮಿತಿಯು ಆಸ್ಪತ್ರೆ ಹಾಗು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗಿರೀಶ್​ ಬಾಬು ಅವರ ಪಾರ್ಥಿವ ಶರೀರವನ್ನು ಇದೀಗ ಭಾರತಕ್ಕೆ ರವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ವತಿಯಿಂದ 3,60,000 ರೂ. ಹಣವನ್ನು ಮಂಜೂರು ಮಾಡಲಾಗಿದ್ದು, ಉಳಿದ ಹಣವನ್ನು ಗಿರೀಶ್​ ಬಾಬು ಪಾಲೆ ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯವರು ಭರಿಸಿರುತ್ತಾರೆ ಎನ್ನಲಾಗಿದೆ. ಗಯಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ನವದೆಹಲಿಯಲ್ಲಿರುವ ನಿವಾಸಿ ಆಯುಕ್ತರು ಮೃತದೇಹವನ್ನು ಆ.05ರ ರಾತ್ರಿ 11:30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನಿಸಿದರು.

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಮತ್ತು ಸಿಬ್ಬಂದಿ ಮೃತದೇಹವನ್ನು ಸ್ವೀಕರಿಸಿ, ಮೃತನ ಪತ್ನಿ ಜಾನಕಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಉಪಸ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net