

IND vs ENG: ಟೀಮ್ ಇಂಡಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಸೋತ ಇಂಗ್ಲೆಂಡ್, ನಡೆಸಿದ ಶತಾಯಗತಾಯ ಪ್ರಯತ್ನಗಳು ಕಡೆಗೂ ವಿಫಲಗೊಂಡಿತು. ಶುಭಮನ್ ಗಿಲ್ ಪಡೆ ಎದುರು ಮಂಡಿಯೂರಿದ ಬೆನ್ ಸ್ಟೋಕ್ಸ್ ಪಡೆಗೆ ತವರಿನಲ್ಲಿ ಭಾರೀ ಮುಖಭಂಗವೇ ಉಂಟಾಗಿದೆ. ದಿ ಓವಲ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 6 ರನ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿತು.
ಕೊನೆಯವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ತನ್ನ ಎದುರಾಳಿಗಳನ್ನು ಮಣಿಸಿ, ಸರಣಿಯನ್ನು 2-2ರಿಂದ ಸಮಬಲಗೊಳಿಸಿತು. ಇತ್ತ ಗಿಲ್ ಪಡೆ ಖುಷಿಯಲ್ಲಿ ತೇಲಾಡುತ್ತಿದ್ದರೆ, ಅತ್ತ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅತೀವ ಬೇಸರದಲ್ಲೇ ಪೆವಿಲಿಯನ್ಗೆ ಮರಳಿದರು. ಸೋಲಿನ ಬಳಿಕ ಪಂದ್ಯ ಕುರಿತಂತೆ ಮಾತನಾಡಿದ ಸ್ಟೋಕ್ಸ್, "ಪಂದ್ಯವನ್ನಾಡದೆ ಡ್ರೆಸ್ಸಿಂಗ್ ರೂಮ್ಗೆ ಹೋಗೋದು ಕಷ್ಟಕರ" ಎಂದರು.
"ಎರಡೂ ತಂಡಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿವೆ. ಈ ಪಂದ್ಯವೂ ಐದು ದಿನಗಳ ಕಾಲ ನಡೆಯಿತು. ಕೊನೆಯವರೆಗೂ ಹೋರಾಡಿದರೂ, ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿರುವುದು ತೀರ ಬೇಸರ ತಂದೊಡ್ಡಿದೆ. ಆದಾಗ್ಯೂ, ಇಂಗ್ಲೆಂಡ್ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಇಂಜುರಿಯಿಂದ ಬಳಲುತ್ತಿದ್ದರೂ ಕ್ರೀಡಾಸ್ಫೂರ್ತಿ ತೋರಿದ ಕ್ರಿಸ್ ವೋಕ್ಸ್ಗೆ ಶ್ಲಾಘಿಸಲೇಬೇಕು. ಕಡೆಯ ದಿನ ತಮ್ಮ ಮುರಿದ ತೋಳಿನಲ್ಲೇ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಿದ್ದು, ನಿಜಕ್ಕೂ ನನಗೆ ಆಶ್ಚರ್ಯ ಉಂಟುಮಾಡಿತು" ಎಂದರು.
"ಈ ಸರಣಿ ವೇಳೆ ಮೈದಾನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಎರಡೂ ತಂಡಗಳ ಆಟಗಾರರು ಕೆಲವೊಮ್ಮೆ ತಾಳ್ಮೆ ಕಳೆದುಕೊಂಡಿದ್ದಾರೆ. ಅಂತಹ ಘಟನೆಗಳ ಬಗ್ಗೆ ನಾವು ಚರ್ಚಿಸುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ, ಇದೆಲ್ಲವೂ ಆಟದ ಒಂದು ಭಾಗ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವೆಲ್ಲರೂ ಮೈದಾನದ ಹೊರಗೆ ಸ್ನೇಹಿತರೆ. ಕ್ರಿಕೆಟ್ ಅಭಿಮಾನಿಯ ದೃಷ್ಟಿಕೋನದಿಂದ, ಸರಣಿ 2-2ರಲ್ಲಿ ಕೊನೆಗೊಂಡಿರುವುದು ಸತ್ಯ. ಆದರೆ, ನಮಗೆ ಅಪೇಕ್ಷಿತ ಫಲಿತಾಂಶ ಸಿಗದೆ ಹೋಗಿದ್ದು, ನಿರಾಶೆ ಮೂಡಿಸಿದೆ. ತಂಡದಲ್ಲಿರುವ ಬಹುತೇಕರು ತಾಳ್ಮೆ ಕಳೆದುಕೊಂಡಿದ್ದಾರೆ" ಎಂದು ಸ್ಟೋಕ್ಸ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು,(ಏಜೆನ್ಸೀಸ್).