ಟ್ರಂಪ್- ಕಮಲಾ ಏಟು ಎದುರೇಟು; ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಂಗು | 2 ತಾಸು ಅಭ್ಯರ್ಥಿಗಳಿಬ್ಬರ ವಾಗ್ವಾದ

us
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳಾದ, ರಿಪಬ್ಲಿಕನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ಬುಧವಾರ ತುರುಸಿನ ಸಂವಾದ ನಡೆಯಿತು. ಎಬಿಸಿ ವಾಹಿನಿ ಫಿಲಿಡೆಲ್ಪಿಯಾದಲ್ಲಿ ಆಯೋಜಿಸಿದ್ದ ಈ ಸಂವಾದದಲ್ಲಿ ನಿರೂಪಕರು ಮತ್ತು ಅಭ್ಯರ್ಥಿಗಳಿಬ್ಬರನ್ನು ಹೊರತುಪಡಿಸಿ ಪ್ರೇಕ್ಷಕರ್ಯಾರೂ ಉಪಸ್ಥಿತರಿರಲಿಲ್ಲ. ವಿದೇಶಾಂಗ ನೀತಿ, ಆರ್ಥಿಕ ನೀತಿ, ವಲಸಿಗರು, ಗರ್ಭಪಾತ, ಗಡಿ ರಕ್ಷಣೆ ಮುಂತಾಗಿ ಅನೇಕ ವಿಷಯಗಳ ಬಗ್ಗೆ ಇಬ್ಬರೂ ನಾಯಕರ ಮಧ್ಯೆ ಸುಮಾರು 2 ಗಂಟೆಗಳ ಕಾಲ ತೀವ್ರ ವಾದ-ಪ್ರತಿವಾದ, ವಾಗ್ವಾದ ನಡೆಯಿತು.

ಸಂವಾದದ ಆರಂಭದಲ್ಲಿ, ‘ಕಳೆದ 4 ವರ್ಷಗಳ ಡೆಮಾಕ್ರಟಿಕ್ ಆಡಳಿತದ ಬಗ್ಗೆ ಅಮೆರಿಕನ್ನರಿಗೆ ಮೆಚ್ಚುಗೆ ಇದೆಯೇ?’ ಎಂಬ ಪ್ರಶ್ನೆ ಎದುರಾಯಿತು. ‘ಟ್ರಂಪ್ ಅಧಿಕಾರಾವಧಿಯಲ್ಲಿ ಅಮೆರಿಕವನ್ನು ಆವರಿಸಿದ್ದ ಅರಾಜಕತೆ, ಆಂತರಿಕ ಸಂಘರ್ಷ, ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ನಿವಾರಿಸುವುದಕ್ಕೇ ಡೆಮಾಕ್ರಟಿಕ್ ಸರ್ಕಾರಕ್ಕೆ ಸಾಕಷ್ಟು ಸಮಯ ಬೇಕಾಯಿತು’ ಎಂದು ಕಮಲಾ ಹೇಳಿದರು. ‘ನನ್ನ ಅಧಿಕಾರಾವಧಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿದ್ದೆ. ಜನರಿಗೆ ಹೊರೆ ಇಳಿಸಿದ್ದೆ’ ಎಂದು ಟ್ರಂಪ್ ಸಮರ್ಥಿಸಿಕೊಂಡರು.

‘ಟ್ರಂಪ್ ವಿದೇಶಾಂಗ ನೀತಿಯಿಂದಾಗಿ ಅನೇಕ ದೇಶಗಳೊಂದಿಗೆ ಅಮೆರಿಕದ ಸಂಬಂಧ ಹಾಳಾಯಿತು. ಇದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿತು’ ಎಂದು ಕಮಲಾ ಟೀಕಿಸಿದರೆ, ‘ಬೈಡೆನ್​ರ ನೀತಿಯಿಂದಾಗಿ ಅಮೆರಿಕದ ವಿರುದ್ಧ ಚೀನಾ, ರಷ್ಯಾ ತೊಡೆತಟ್ಟುವಂತಾಯಿತು. ಹಮಾಸ್ ಉಗ್ರರಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ನೆರವು ಸಿಕ್ಕಿತು. ನಾನು ಇದನ್ನೆಲ್ಲ ನಿಯಂತ್ರಿಸಿದ್ದೆ. ಚೀನಾ, ಉತ್ತರ ಕೊರಿಯಾ ಮುಂತಾದ ದೇಶಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದೆ’ ಎಂದು ಟ್ರಂಪ್ ತಿರುಗೇಟು ನೀಡಿದರು.

‘ಅಮೆರಿಕದ ಗಡಿ ರಕ್ಷಣೆ ನಮ್ಮ ಕರ್ತವ್ಯ. ಗಡಿಯನ್ನು ಮುಕ್ತವಾಗಿಸಿದರೂ ಭಯೋತ್ಪಾದನೆ, ಮಾದಕ ವಸ್ತುಗಳು ಒಳಬರಲು ಬಿಟ್ಟಿಲ್ಲ. ಬುದ್ಧಿವಂತ ವಿದೇಶೀಯರು ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದೇವೆ. ಅದರಿಂದ ನಮ್ಮ ದೇಶಕ್ಕೆ ಲಾಭವಾಗುತ್ತಿದೆ’ ಎಂದು ಕಮಲಾ ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಟ್ರಂಪ್, ‘ಬೈಡೆನ್​ರ ಮುಕ್ತ ಗಡಿ ನೀತಿಯಿಂದಾಗಿ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ. ಮೆಕ್ಸಿಕೋ ಗಡಿಯಲ್ಲಿ ದೊಡ್ಡ ಗೋಡೆ ಕಟ್ಟುವ ನನ್ನ ಆಸೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಈಡೇರಲಿಲ್ಲ. ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರ ತಡೆಯಲು ಸಶಕ್ತ ಗಡಿ ಅಗತ್ಯ’ ಎಂದು ಹೇಳಿದರು. ‘ಟ್ರಂಪ್ ಅಧ್ಯಕ್ಷರಾಗಿದ್ದಾಗ ವಿನಾಕಾರಣ ಅಧಿಕಾರಿಗಳನ್ನು ವಜಾ ಮಾಡುತ್ತಿದ್ದರು. ವಾಗ್ದಂಡನೆ ವಿಧಿಸುತ್ತಿದ್ದರು. ಈ ವರ್ತನೆ ಹಾಸ್ಯಾಸ್ಪದವಾಗಿತ್ತು’ ಎಂದು ಕಮಲಾ ಟೀಕಿಸಿದರು. ಇದಕ್ಕೆ ಉತ್ತರಿಸಿದ ಟ್ರಂಪ್, ‘ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದ ಹಂಗೇರಿ ಪ್ರಧಾನಿಯೇ ನನ್ನ ಆಡಳಿತವನ್ನು ಪ್ರಶಂಸಿಸಿದ್ದರು. ಬೇರೆ ದೇಶಗಳ ನಾಯಕರು ಕೇವಲ ರಾಜಕೀಯಕ್ಕೆ ನನ್ನನ್ನು ಬೈದಿರಬಹುದು’ ಎಂದು ಸಮರ್ಥಿಸಿಕೊಂಡರು.

ವಲಸಿಗರಿಗೆ ಉದ್ಯೋಗ: ‘ಅಮೆರಿಕದ ಬೆಳವಣಿಗೆಯಲ್ಲಿ ಬೇರೆ ದೇಶಗಳಿಂದ ಬಂದವರ ಕೊಡುಗೆ ಸಾಕಷ್ಟಿದೆ. ಅವರ ಉದ್ಯೋಗ ಕಿತ್ತುಕೊಂಡು ಓಡಿಸಿದ ಟ್ರಂಪ್, ಬೇರೆ ಯಾರೂ ಅಮೆರಿಕಕ್ಕೆ ಬರದಂತೆ ಭಯ ಮೂಡಿಸಿದ್ದರು’ ಎಂದು ಕಮಲಾ ಆರೋಪಿಸಿದರು. ‘ಉದ್ಯೋಗಾವಕಾಶ ಜಾಸ್ತಿ ಇರುವ ಕ್ಷೇತ್ರಗಳಲ್ಲಿ ಬೇರೆ ದೇಶದವರು ಕೆಲಸ ಮಾಡಲು ಬಿಟ್ಟಿದ್ದೆವು. ವಿನಾಕಾರಣ ಯಾರ ಕೆಲಸವನ್ನೂ ಕಿತ್ತುಕೊಂಡಿಲ್ಲ. ಬೈಡೆನ್ ಸರ್ಕಾರ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳುವ ನೀತಿ ಹೊಂದಿದೆ. ಇದರಿಂದಾಗಿ ಈಗ ಅಮೆರಿಕನ್ನರೇ ಕೆಲಸಕ್ಕಾಗಿ ಅಲೆಯುವಂತಾಗಿದೆ’ ಎಂದು ಟ್ರಂಪ್ ತಿರುಗೇಟು ನೀಡಿದರು.

ಗೆದ್ದವರ್ಯಾರು?: ಸಾಮಾನ್ಯವಾಗಿ ಸಂವಾದದ ನಂತರ ಸಾರ್ವಜನಿಕ ವಲಯದ ಪ್ರತ್ರಿಕ್ರಿಯೆಗಳನ್ನು ಆಧರಿಸಿ ಜಯಶಾಲಿಗಳನ್ನು ಊಹಿಸಲಾಗುತ್ತದೆ. ಆದರೆ ಈ ಬಾರಿಯ ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ಬಂದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಮಲಾ ಬಗ್ಗೆ ಒಲವು ಹೆಚ್ಚಿದೆ. ಮುಂದಿನ ಸಂವಾದಗಳಲ್ಲಿ ಟ್ರಂಪ್ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.

ಬೆಟ್ಟಿಂಗ್ ಭರಾಟೆ: ಈ ಸಂವಾದದ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಮಾರುಕಟ್ಟೆ ತೀವ್ರ ಸಕ್ರಿಯವಾಗಿತ್ತು. ಬೆಟ್ ಕಟ್ಟುವವರಿಗೆ ಕಮಲಾ ಹ್ಯಾರಿಸ್ ಫೇವರಿಟ್ ಆಗಿದ್ದರು. ಅದಕ್ಕೆ ಪೂರಕವಾಗಿ ಕಮಲಾ ಕೂಡ ಇಂದಿನ ಸಂವಾದದಲ್ಲಿ ಮೊನಚು ಮಾತುಗಳಿಂದ ಮಿಂಚಿದರು. ಅಮೆರಿಕದಲ್ಲಿ ಬೆಟ್ಟಿಂಗ್ ಎಂದರೆ ಭವಿಷ್ಯ ಸೂಚಿಸುವ ವೇದಿಕೆ ಎಂದೇ ಜನಜನಿತ. ಪಾಲಿಮಾರ್ಕೆಟ್ ಸಂಸ್ಥೆಯು ಕಮಲಾಗೆ ಶೇ. 75 ಅಂಕ, ಟ್ರಂಪ್​ಗೆ ಶೇ. 25 ಅಂಕ ನೀಡಿದ್ದರೆ, ಬೆಟ್​ಯುುಎಸ್ ಕಮಲಾಗೆ ಶೇ. 68.75, ಟ್ರಂಪ್​ಗೆ ಶೇ. 39.92 ಅಂಕ ನೀಡಿತ್ತು.

ಗರ್ಭಪಾತ ನಿಯಮ: ಗರ್ಭಪಾತಕ್ಕೆ ಕಾನೂನು ಮಾನ್ಯತೆ ಒಳ್ಳೆಯದು ಎಂದು ಕಮಲಾ ವಾದಿಸಿದರೆ, ‘ಅದು ತಪ್ಪು. 7, 8, 9ನೇ ತಿಂಗಳಲ್ಲಿ ಗರ್ಭಪಾತ ತಾಯಿ-ಮಗುವಿಗೆ ಅಪಾಯ’ ಎಂದು ಟ್ರಂಪ್ ಹೇಳಿದರು. ತುಂಬು ಗರ್ಭಿಣಿಯರಿಗೆ ಗರ್ಭಪಾತ ಮಾಡಿಸುವುದನ್ನು ನಾವೂ ಒಪ್ಪುವುದಿಲ್ಲ. ಆದರೆ, ಅಗತ್ಯ ಸಂದರ್ಭಗಳಲ್ಲಿ ಗರ್ಭಪಾತ ಅನಿವಾರ್ಯ ಎಂದು ಕಮಲಾ ವಾದಿಸಿದರು.

ಆರ್ಥಿಕ ನೀತಿ: ಟ್ರಂಪ್ ಅನುಸರಿಸಿದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಮಧ್ಯಮ ವರ್ಗ ತೊಂದರೆಗೆ ಒಳಗಾಗಿದ್ದನ್ನು ನೊಬೆಲ್ ಪುರಸ್ಕೃತರೂ ಸೇರಿದಂತೆ ಹಲವಾರು ಆರ್ಥಿಕ ತಜ್ಞರು ದೃಢಪಡಿಸಿದ್ದಾರೆಂದು ಕಮಲಾ ಹೇಳಿದರು. ಇದಕ್ಕೆ ಉತ್ತರಿಸಿದ ಟ್ರಂಪ್, ‘ಆರ್ಥಿಕ ನೀತಿ ಉತ್ತಮವಾಗಿತ್ತು. ಚೀನಾಕ್ಕೆ ಪ್ರತಿಸ್ಪರ್ಧಿಯಾಗುವುದು ನಮ್ಮ ಉದ್ದೇಶ ವಾಗಿತ್ತು. ಅದರಿಂದ ಅಮೆರಿಕದಲ್ಲಿ ಯಾರಿಗೂ ತೊಂದರೆಯಾಗಿಲ್ಲ’ ಎಂದು ಸಮರ್ಥಿಸಿಕೊಂಡರು.

ಈ ಸಂವಾದವನ್ನು ಏರ್ಪಡಿಸಿದ್ದ ಎಬಿಸಿ ಚಾನೆಲ್​ನ ಮಾಡರೇಟರ್​ಗಳು ಕಮಲಾ ಪರವಾಗಿ ವರ್ತಿಸಿದರು. ನನ್ನೊಬ್ಬನ ಮೇಲೆ ಮೂವರು ಮುಗಿಬಿದ್ದಂತೆ ಭಾಸವಾಗುತ್ತಿತ್ತು. | ಡೊನಾಲ್ಡ್ ಟ್ರಂಪ್ , ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net