ನವದೆಹಲಿ: ರಾಷ್ಟ್ರೀಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 70 ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಸರ್ವೇಗೆ ಜಾಗ ಅಗೆಯಲು ಎಎಸ್‌ಐಗೆ ಅನುಮತಿ ಕೋರಿ ಹಿಂದೂಗಳಿಂದ ಒತ್ತಾಯ
ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, “70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯಾದ ಆಯುಷ್ಮಾನ್ ಭಾರತ್ ಪಿಎಂ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಒಳಗೊಳ್ಳಲು ಕೇಂದ್ರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅಡಿಯಲ್ಲಿ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯವನ್ನು ಲೆಕ್ಕಿಸದೆ 5 ಲಕ್ಷದ ರೂಪಾಯಿ ಆರೋಗ್ಯ ರಕ್ಷಣೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರವು ದೇಶಾದ್ಯಂತ 4.5 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
ಈ ಯೋಜನೆಯಿಂದ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ, ಹಾಗೂ ಇದು ದೇಶದ 4.5 ಕೋಟಿ ಕುಟುಂಬಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಸುಮಾರು 6 ಕೋಟಿ ಹಿರಿಯ ನಾಗರಿಕರು ಸೇರಿದ್ದಾರೆ ಎಂದು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ದೇಶದಾದ್ಯಂತ ಕೆಲಸ ಮಾಡುತ್ತಿರುವ 37 ಲಕ್ಷ ಆಶಾ ಕಾರ್ಯಕರ್ತೆಯರು, ಎಡಬ್ಲ್ಯೂಡಬ್ಲ್ಯೂಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಆರೋಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ.
ಸರ್ಕಾರದ ಉಚಿತ ಆರೋಗ್ಯ ವಿಮೆಯನ್ನು ಹೇಗೆ ಪಡೆಯುವುದು?
* 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅಡಿಯಲ್ಲಿ ವಿಶಿಷ್ಟವಾದ ಕಾರ್ಡ್ ಅನ್ನು ಸ್ವೀಕರಿಸುತ್ತಾರೆ.
* ಈಗಾಗಲೇ AB PM-JAY ವ್ಯಾಪ್ತಿಗೆ ಒಳಪಡುವವರು ತಮ್ಮ ಕುಟುಂಬದ ಹಿರಿಯ ನಾಗರಿಕರಿಗೆ ವಿಶೇಷವಾಗಿ ವಾರ್ಷಿಕ 5 ಲಕ್ಷ ರೂ. ಹೆಚ್ಚುವರಿ ಟಾಪ್-ಅಪ್ ಪಡೆಯುತ್ತಾರೆ.
* ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿರುವ ಹಿರಿಯ ನಾಗರಿಕರು ತಮ್ಮ ಪ್ರಸ್ತುತ ಯೋಜನೆಯನ್ನು ಮುಂದುವರಿಸಬಹುದು ಅಥವಾ AB PM-JAY ಅಡಿಯಲ್ಲಿ ವ್ಯಾಪ್ತಿಯನ್ನು ಆರಿಸಿಕೊಳ್ಳಬಹುದು.
ಏನಿದು ಆಯುಷ್ಮಾನ್ ಭಾರತ್ ಯೋಜನೆ?
* ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಹಣದ ಆರೋಗ್ಯ ಭರವಸೆ ಯೋಜನೆಯಾಗಿದೆ.
* ಇದು ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗಳಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ರಕ್ಷಣೆ ನೀಡುತ್ತದೆ.
* ಈ ಯೋಜನೆಯು ಕುಟುಂಬದ ಸದಸ್ಯರ ವಯಸ್ಸನ್ನು ಲೆಕ್ಕಿಸದೆ 12.34 ಕೋಟಿ ಕುಟುಂಬಗಳಿಂದ 55 ಕೋಟಿ ಜನರನ್ನು ಒಳಗೊಂಡಿದೆ.
* 7.37 ಕೋಟಿ ಆಸ್ಪತ್ರೆ ದಾಖಲಾತಿಗಳನ್ನು ಯೋಜನೆಯಡಿ ಒಳಪಡಿಸಲಾಗಿದ್ದು, 49 ಪ್ರತಿಶತ ಫಲಾನುಭವಿಗಳು ಮಹಿಳೆಯರಾಗಿದ್ದಾರೆ.
* ಇಲ್ಲಿಯವರೆಗೆ, ಈ ಆರೋಗ್ಯ ಉಪಕ್ರಮದ ಮೂಲಕ ಸಾರ್ವಜನಿಕರು 1 ಲಕ್ಷ ಕೋಟಿ ರೂ.ಗೂ ಹೆಚ್ಚು ಪ್ರಯೋಜನ ಪಡೆದಿದ್ದಾರೆ.