ಭಾರತ-ಪಾಕ್​ ಕದನ ವಿರಾಮಕ್ಕೆ... ಕಳೆದ 6 ತಿಂಗಳಲ್ಲಿ ಟ್ರಂಪ್ ಸಾಧನೆಗಳೇನು? ಪಟ್ಟಿ ಮಾಡಿದ ಶ್ವೇತಭವನ | Trump

ವಿಜಯವಾಣಿ (54)
Published on

Trump: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕದನ ವಿರಾಮ ಮೂಲಕ ಅಂತ್ಯವಾಡಿದ್ದು ಡೊನಾಲ್ಡ್​ ಟ್ರಂಪ್ ಎಂದು ಅಮೆರಿಕಾದ ಶ್ವೇತಭವನ ಪುನರುಚ್ಚರಿಸಿದೆ.

ಸಾಧನೆ ಪಟ್ಟಿಗೆ ಭಾರತ-ಪಾಕ್​ ಕದನ ವಿರಾಮ ಸೇರ್ಪಡೆ

ಭಾರತ ಮತ್ತು ಪಾಕ್​ ನಡುವೆ ನಡೆಯುತ್ತಿದ್ದ ವೈಮಾನಿಕ ದಾಳಿಗಳಿಂದ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅಮೆರಿಕ ಅಧ್ಯಕ್ಷರ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆಯಾಯಿತು ಎಂದು ಅಮೆರಿಕ ಆಡಳಿತದ ಅಧಿಕಾರಿಗಳು ಮತ್ತದೇ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ವಿಚಾರ ಪುನರುಚ್ಚರಿಸಿರುವ ಶ್ವೇತಭವನ, ಕಳೆದ ಆರು ತಿಂಗಳಲ್ಲಿ ಟ್ರಂಪ್​ ಅವರ ಸಾಧನೆಗಳೇನು? ಎಂಬುದನ್ನು ಪಟ್ಟಿ ಕೂಡ ಮಾಡಿಟ್ಟಿದೆ.

ರಷ್ಯಾ-ಯುಕ್ರೇನ್​ ಮಧ್ಯಸ್ಥಿಕೆಗೂ ಟ್ರಂಪ್​

ಡೊನಾಲ್ಡ್ ಟ್ರಂಪ್ ಭಾರತ-ಪಾಕ್​ ನಡುವಿನ ಯುದ್ಧವನ್ನು ತಡೆದರು ಮತ್ತು ರಷ್ಯಾ-ಉಕ್ರೇನ್ ನಡುವಿನ ಶಾಂತಿಗೆ ಮಧ್ಯಸ್ಥಿಕೆ ವಹಿಸಿದರು. ಅಧ್ಯಕ್ಷ ಟ್ರಂಪ್ ಗಾಜಾದಲ್ಲಿ ಶಾಂತಿ ಒಪ್ಪಂದದ ಮಾತುಕತೆ ನಡೆಸಲು ಕೂಡ ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಪ್ರಯತ್ನಗಳ ಪರಿಣಾಮವಾಗಿ ಅನೇಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟ್ರಂಪ್ ಆದೇಶದಂತೆ ಇರಾನ್‌ನಲ್ಲಿನ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂಬುದನ್ನೂ ಒತ್ತಿ ಹೇಳಿದ್ದಾರೆ.

"ನಾವು ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕದನ ವಿರಾಮ ತಂದೆವು. ಇತ್ತೀಚೆಗೆ ಇರಾನ್‌ನಲ್ಲಿ ನಡೆಸಿದ ದಾಳಿಯನ್ನು ಎಲ್ಲರೂ ನೋಡಿದ್ದಾರೆ. ನಾವು ಆ ದೇಶದ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನೇ ಛಿದ್ರಗೊಳಿಸಿದ್ದೇವೆ" ಎಂದು ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ. ಈ ಹಿಂದೆ ಟ್ರಂಪ್​ ಕದನ ವಿರಾಮಕ್ಕೆ ನಾನೇ ಕಾರಣ ಎಂದಾಗ ಇದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಭಾಗವಹಿಸುವಿಕೆ ಇಲ್ಲ ಎಂದು ಭಾರತ ಖಡಕ್ ತಿರುಗೇಟು ನೀಡಿತ್ತು. ಈ ಮೂಲಕ ಟ್ರಂಪ್​ ಮಧ್ಯಸ್ಥಿಕೆಯಿಂದ ಕದನ ವಿರಾಮ ಒಪ್ಪಿಕೊಂಡಿದ್ದಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net